ಕಾರ್ಯಕರ್ತರ ಮಾರಾಮಾರಿ
ಕನ್ನಡಪ್ರಭ ವಾರ್ತೆ, ರೋಣ, ಮಾ.7
ಪುರಸಭೆಯ 4ನೇ ವಾರ್ಡಿನಲ್ಲಿ ಮತದಾನದ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಬಿಜೆಪಿ ಅಭ್ಯರ್ಥಿ ಗದಿಗೆಪ್ಪ ಕಿರೇಸೂರ ತಲೆಗೆ ತೀವ್ರ ಗಾಯವಾಗಿದೆ. ಪರಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.
ಘಟನೆ ವಿವರ: 4ನೇ ವಾರ್ಡಿನ ಮತದಾನವು ಪುರಸಭೆಯಲ್ಲಿ ನಡೆದಿದ್ದು, ವೃದ್ದೆಯೊಬ್ಬರ ಮತದಾನಕ್ಕೆ ಸಂಬಂಧಿಸಿದಂತೆ ಅವರ ರಕ್ತ ಸಂಬಂಧಿಕರು ಮಾತ್ರ ಅವರ ಸಹಾಯಕ್ಕೆ ಹೋಗಬೇಕೆಂದು ಬಿಜೆಪಿ ಕಾರ್ಯಕರ್ತರು ತಕರಾರು ತೆಗೆದಾಗ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಪರಸ್ಪರ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಬಿಜೆಪಿ ಅಭ್ಯರ್ಥಿ ಸೇರಿದಂತೆ ನಾಲ್ವರು ಗಾಯಗೊಂಡರು.
ಈ ಸಂದರ್ಭದಲ್ಲಿ ಎರಡು ಕಡೆಯ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಹೊಡೆದಾಡಿದರು. ಸ್ಥಳದಲ್ಲಿದ್ದ ಬಿಜೆಪಿ ಅಭ್ಯರ್ಥಿ ಗದಿಗೆಪ್ಪ ಕಿರೇಸೂರಗೆ ತಲೆಗೆ ಪೆಟ್ಟುಬಿದ್ದಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು. ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದರಿಂದ 25 ನಿಮಿಷ ಮತದಾನ ಸ್ಥಗಿತಗೊಂಡಿತು. ಘಟನೆ ನಡೆಯುತ್ತಿದ್ದಂತೆ ಸುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಸ್ವ-ಪ್ರೇರಣೆಯಿಂದ ಬಂದ್ ಮಾಡಲಾಯಿತು.
ಲಘು ಲಾಠಿಪ್ರಹಾರ: ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ನಂತರ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸ್ ಪಡೆ ಗುಂಪು ಚದುರಿಸಲು ಲಾಠಿ ಬೀಸಿದರು. ನಂತರ ಅಲ್ಲಲ್ಲಿ ಸೇರಿದ್ದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತದಾನ ಸ್ಥಗಿತಗೊಳಿಸಬೇಕೆಂದು ಘೋಷಣೆ ಹಾಕತೊಡಗಿದಾಗ ಮತ್ತೆ ಪೊಲೀಸರು ಲಾಠಿ ಮೂಲಕ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಮತದಾರರು ಮತದಾನ ಮಾಡದೇ ಮರಳಿ ಮನೆಗೆ ತೆರಳುತ್ತಿರುವ ದೃಶ್ಯ ಕಂಡ ಪೊಲೀಸರು ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಯಿಸುವ ಮೂಲಕ ಮತದಾನ ಸರಾಗವಾಗಿ ನಡೆಯುವಂತೆ ಅನುವು ಮಾಡಿಕೊಟ್ಟರು.
ಸ್ಥಳಕ್ಕೆ ಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಎಸ್. ಶರಣಪ್ಪ ಭೇಟಿ ನೀಡಿದರು. ಘಟನೆ ಕುರಿತು ಸಿಪಿಐ ಮಲ್ಲನಗೌಡ ನಾಯ್ಕರ್ರಿಂದ ಮಾಹಿತಿ ಪಡೆದರು. ಚುನಾವಣಾ ಸಿಬ್ಬಂದಿಯ ವಿಚಾರಣೆ ನಡೆಸಿದರು. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಜರುಗಿಸಲು ಸಿಪಿಐ ಮಲ್ಲನಗೌಡ ನಾಯ್ಕರ್ಗೆ ಸೂಚಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.