ಶಿರಹಟ್ಟಿ ಪಪಂಗೆ ಶೇ. 78.74 ಮತದಾನ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 7
ಪಟ್ಟಣದ 16 ವಾರ್ಡ್‌ಗಳಿಗೆ ಗುರುವಾರ ಜರುಗಿದ ಚುನಾವಣೆಯಲ್ಲಿ ಬೆಳಗ್ಗೆ 7 ರಿಂದಲೇ ಜನರು ಮತದಾನ ಕಾರ್ಯದಲ್ಲಿ ಚುರುಕಿನಿಂದ ಪಾಲ್ಗೊಂಡಿದ್ದ ದೃಶ್ಯ ಎಲ್ಲ ವಾರ್ಡ್‌ಗಳಲ್ಲಿಯೂ ಕಂಡುಬಂದಿತು.
ಪಟ್ಟಣದ ಒಂದೆರಡು ಕಡೆಗಳಲ್ಲಿ ಸಣ್ಣ ಪುಟ್ಟ ಘಟನೆ ಹೊರತುಪಡಿಸಿದರೆ ಎಲ್ಲ 16 ವಾರ್ಡ್‌ಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆಯಿಂದಲೇ ಎಲ್ಲ ಮತಗಟ್ಟೆಗಳಲ್ಲಿ ಚುರುಕಿನಿಂದ ಮತದಾನ ಪ್ರಾರಂಭವಾಯಿತು. ಮಧ್ಯಾಹ್ನ ಮತ್ತು ಸಂಜೆ ವೇಳೆ ನೀರಸ ಮತದಾನ ಪ್ರತಿಕ್ರಿಯೆ ಮತದಾರರಿಂದ ಕಂಡುಬಂದಿತು. ಪಟ್ಟಣದ 17 ವಾರ್ಡ್‌ಗಳಲ್ಲಿ ಈಗಾಗಲೇ ಒಂದು ಅವಿರೋಧ ಆಯ್ಕೆ ನಡೆದಿದ್ದು, ಉಳಿದಂತೆ 16 ವಾರ್ಡ್‌ಗಳಿಗೆ ನಡೆದ ಮತದಾನದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಪಟ್ಟಣದ ಕೆಲವೊಂದು ವಾರ್ಡ್‌ಗಳಲ್ಲಿ ವಯೋವೃದ್ಧರನ್ನು, ಅನಾರೋಗ್ಯದಿಂದ ಬಳಲುವವರನ್ನು ಅಭ್ಯರ್ಥಿಗಳ ಬೆಂಬಲಿಗರು ಚಕ್ಕಡಿ, ಟಂಟಂ ವಾಹನ, ಬೈಕ್‌ಗಳಲ್ಲಿ ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಿಸಿಲ ಧಗೆಯ ನಡುವೆ ಏರುಗತಿಯಲ್ಲಿ ನಡೆದ ಮತದಾನದಲ್ಲಿ ಸಾವಿರಾರು ಜನರು ಮತದಾನಕ್ಕಾಗಿ ಆಗಮಿಸಿದ ವೇಳೆ ನೂಕುನುಗ್ಗಲು ಉಂಟಾದ ಘಟನೆಗಳು ಜರುಗಿವೆ. ಪಟ್ಟಣದ ವಾರ್ಡ್ 7 ರಲ್ಲಿ 98 ವಯಸ್ಸಿನ ಮಹಬೂಬಸಾಬ ಮಿರ್ಜಿ ಎಂಬ ವೃದ್ಧರನ್ನು ಅವರ ಸಂಬಂಧಿಕರು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.