ಕಾಂಗ್ರೆಸ್‌ಗೆ ಮತ್ತೆ ಶುಕ್ರದೆಸೆ ಶುರು
ಕನ್ನಡಪ್ರಭ ವಾರ್ತೆ, ಗದಗ, ಮಾ. 11
ಬಿಎಸ್‌ಆರ್ ಕಾಂಗ್ರೆಸ್‌ನ ಫ್ಯಾನ್ ಗಾಳಿಗೆ ಹಾಗೂ ಕೆಜೆಪಿ ಅಭ್ಯರ್ಥಿಗಳ ಸ್ಪರ್ಧೆಯಿಂದ ಆಡಳಿತಾರೂಢ ಬಿಜೆಪಿಯ (ಕಮಲ) ಪಕಳೆಗಳು ಉದುರಿಹೋಗಿದ್ದು, ನಗರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಗದ್ದುಗೆ ಏರುತ್ತಿದೆ. ಜಿಲ್ಲೆಯ ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ ಸೋಲಿಗೆ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಕಾರಣವಾಗಿದೆ. ಜಿಲ್ಲೆಯಾದ್ಯಂತ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಗದಗ ನಗರಸಭೆ: ಗದಗ-ಬೆಟಗೇರಿ ನಗರಸಭೆಗೆ 35 ವಾರ್ಡ್‌ಗಳಿದ್ದು, ಹಿಂದಿನ ಅವಧಿಯಲ್ಲಿ 18 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿದಿತ್ತು. ಆದರೆ, 5 ವರ್ಷದ ಅವಧಿಯಲ್ಲಿ ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ 20, ಬಿಎಸ್‌ಆರ್ 7, ಬಿಜೆಪಿ 5, ಪಕ್ಷೇತರರು 2 ಹಾಗೂ ಕೆಜೆಪಿ 1 ಸ್ಥಾನ ಪಡೆದುಕೊಂಡಿದೆ. ಆಡಳಿತಾರೂಢ ಬಿಜೆಪಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಬಿಎಸ್‌ಆರ್ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಮುಂಡರಗಿ ಪುರಸಭೆ: ಕ್ಷೇತ್ರ ಮರುವಿಂಗಡಣೆಯ ನಂತರ ಅತಂತ್ರವಾಗಿದ್ದು, ಮುಂಡರಗಿ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 12 ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. 8 ಸ್ಥಾನ ಪಡೆದಿರುವ ಬಿಜೆಪಿ ವಿರೋಧ ಪಕ್ಷ ಸ್ಥಾನಕ್ಕೆ ತೃಪ್ತಿ ಪಡಬೇಕಿದೆ. 2 ಪಕ್ಷೇತರ, 1 ಸ್ಥಾನ ಜೆಡಿಎಸ್ ಗಳಿಸಿದೆ.
ರೋಣ ಪುರಸಭೆ: ರೋಣ ಪುರಸಭೆ ಕಳೆದ ಬಾರಿಯಂತೆ ಮತ್ತೆ ಈ ಬಾರಿಯೂ ಕಾಂಗ್ರೆಸ್ ಪಾಲಾಗಿದೆ. 23 ಸದಸ್ಯ ಬಲದ ಈ ಪುರಸಭೆಯಲ್ಲಿ ಕಾಂಗ್ರೆಸ್ 16 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 5 ಸ್ಥಾನ ಪಡೆಯುವ ಮೂಲಕ ಕಳೆದ ಬಾರಿಗೆ ಹೋಲಿಕೆ ಮಾಡಿದಲ್ಲಿ ಉತ್ತಮ ಸಾಧನೆ ಮಾಡಿದೆ. ಬಿಎಸ್‌ಆರ್ ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಪಡೆದಿದ್ದಾರೆ.
ನರಗುಂದ ಪುರಸಭೆ: ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲರು ಪ್ರತಿನಿಧಿಸುವ ನರಗುಂದ ಕ್ಷೇತ್ರದಲ್ಲಿನ ಈ ಪುರಸಭೆ ಫಲಿತಾಂಶ ಅತ್ಯಂತ ಕುತೂಹಲ ಕೆರಳಿಸಿತ್ತು. 23 ವಾರ್ಡ್‌ಗಳನ್ನು ಹೊಂದಿರುವ ಈ ಪುರಸಭೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ 12 ಸ್ಥಾನ ಪಡೆವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್ 9 ಸ್ಥಾನ ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತ ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗೆ ಅಲ್ಪ ಹಿನ್ನಡೆಯಾಗಿದ್ದು, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಪಕ್ಷೇತರರು 1 ಸ್ಥಾನ ಗೆದ್ದಿದ್ದಾರೆ.
ಲಕ್ಷ್ಮೇಶ್ವರ ಪುರಸಭೆ: ಅತ್ಯಂತ ಕುತೂಹಲ ಕೆರಳಿಸಿದ್ದ ಲಕ್ಷ್ಮೇಶ್ವರ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 23 ವಾರ್ಡ್ ಒಳಗೊಂಡಿರುವ ಈ ಪುರಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಕೇವಲ 3 ಸ್ಥಾನಗಳಿಸುವ ಮೂಲಕ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್ 10, ಬಿಎಸ್‌ಆರ್ ಕಾಂಗ್ರೆಸ್ 7, ಕೆಜೆಪಿ 1 ಹಾಗೂ ಪಕ್ಷೇತರರು 1 ಸ್ಥಾನ ಪಡೆದಿದ್ದಾರೆ. 1 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿತ್ತು. ಇಲ್ಲಿನ ಮತದಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲವಾದರೂ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ತೀವ್ರ ಮುಖಭಂಗವಾಗುವ ರೀತಿಯಲ್ಲಿ ಫಲಿತಾಂಶ ಹೊರಬಿದ್ದಿದೆ.
ಶಿರಹಟ್ಟಿ ಪಟ್ಟಣ ಪಂಚಾಯಿತಿ: 17 ವಾರ್ಡ್‌ಗಳನ್ನು ಹೊಂದಿದ್ದ ಶಿರಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ಆಡಳಿತ ವಿರೋಧಿ ಅಲೆ ಬಲು ಜೋರಾಗಿಯೇ ಪ್ರಭಾವ ಬೀರಿದೆ. ಜೆಡಿಎಸ್ 7, ಕಾಂಗ್ರೆಸ್ 5, ಬಿಜೆಪಿ 3, ಬಿಎಸ್‌ಆರ್ 1 ಸ್ಥಾನ ಗಳಿಸಿದೆ. 1 ಸ್ಥಾನ ಅವಿರೋಧ ಆಯ್ಕೆಯಾಗಿದೆ.
ಗಜೇಂದ್ರಗಡ ಪುರಸಭೆ: ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಪ್ರತಿನಿಧಿಸುವ ಗಜೇಂದ್ರಗಡ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಬಿಜೆಪಿ 17 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ 5 ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಿಪಿಐಎಂ ತನ್ನ ಖಾತೆ ತೆರೆದಿದ್ದು, 1 ಸ್ಥಾನ ಗಳಿಸಿದೆ. ಜಿಲ್ಲೆಯ ಮಟ್ಟಿಗೆ ಇದೊಂದು ಹೊಸ ಮುನ್ನುಡಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ನರೇಗಲ್ಲ ಪಪಂ: ಈ ಪಟ್ಟಣ ಪಂಚಾಯಿತಿಯಲ್ಲಿ 17 ವಾರ್ಡ್‌ಗಳಿದ್ದು, ಈ ಬಾರಿ ಮತದಾರ ಯಾರಿಗೂ ಸ್ಪಷ್ಟ ಬಹುಮತ ನೀಡದೇ ಇರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ 8 ಸ್ಥಾನ, ಕಾಂಗ್ರೆಸ್ 6 ಸ್ಥಾನ, 2 ಪಕ್ಷೇತರರು ಹಾಗೂ 1ರಲ್ಲಿ ಕೆಜೆಪಿ ಗೆಲುವು ಸಾಧಿಸಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಗೊಂದಲ ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ.
ಮುಳಗುಂದ ಪಟ್ಟಣ ಪಂಚಾಯಿತಿ: ಮುಳಗುಂದದಲ್ಲಿ ಒಟ್ಟು 19 ವಾರ್ಡ್‌ಗಳಿದ್ದು, ಕಾಂಗ್ರೆಸ್ 16 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಬಿಎಸ್‌ಆರ್ ಕಾಂಗ್ರೆಸ್ 3 ಸ್ಥಾನಗಳಲ್ಲಿ ಗೆಲವು ಸಾಧಿಸಿ, ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮುಳಗುಂದ ಪಟ್ಟಣದಲ್ಲಿ ಬಿಜೆಪಿ ಖಾತೆಯನ್ನೇ ತೆರೆಯಲು ಸಾಧ್ಯವಾಗದೇ ಇರುವುದನ್ನು ಗಮನಿಸಿದಲ್ಲಿ ಹಾಲಿ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ಬಿಜೆಪಿಯ ಬಗ್ಗೆ ಜನತೆ ಹೊಂದಿರುವ ನಿಲುವು ಸ್ಪಷ್ಟವಾಗುತ್ತದೆ.
- ಶಿವಕುಮಾರ ಕುಷ್ಟಗಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.