16ರಂದು ನೆಹರು ಕೇಂದ್ರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 13
ತಾಲೂಕಿನ ಸಂಭಾಪುರ ಗ್ರಾಮದಲ್ಲಿ ಮಾ. 16 ರಂದು ಮ. 12 ಗಂಟೆಗೆ ನೆಹರು ಯುವಕೇಂದ್ರದ ಜಿಲ್ಲಾ ಕಚೇರಿ, ಜಿಲ್ಲಾ ಯುವ ಸಮಾವೇಶ, ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನೆ ನೆರವೇರಲಿದೆ ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ ಬಿ. ಗೋವಿಂದಭಟ್ ಹೇಳಿದರು.
ಅವರು ಬುಧವಾರ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರವು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ನೆಹರು ಯುವ ಕೇಂದ್ರವು ರಾಜ್ಯದ 30 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಹೊಸದಾಗಿ 7 ಜಿಲ್ಲೆಗಳಲ್ಲಿ ಪ್ರಾರಂಭಗೊಂಡು ಕೆಲಸ ನಿರ್ವಹಿಸುತ್ತಿದೆ. ಅವುಗಳಲ್ಲಿ ಒಂದಾದ ಗದಗ ಜಿಲ್ಲೆಯ ನೆಹರು ಯುವ ಕೇಂದ್ರ ತನ್ನ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದು, ಮಾ. 16 ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದರು.
ಕೇಂದ್ರ ಸಂಘಟನೆಯ ಆಶಯದಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ 1 ಯುವಸಂಘ, 1 ಯುವತಿ ಮಂಡಳಿ, 1 ಮಹಿಳಾ ಮಂಡಳಿ ಇರಬೇಕೆನ್ನುವ ಆಶಯಕ್ಕೆ ಪೂರಕವಾಗಿ ಈ ಜಿಲ್ಲೆಯಲ್ಲಿ ಕೂಡ ಅದಕ್ಕೆ ಪೂರಕ ಚಟುವಟಿಕೆ ಪ್ರಾರಂಭಗೊಂಡಿವೆ.
ಜಿಲ್ಲೆಯ ಯುವಜನರಿಗೆ ನೆಹರು ಕೇಂದ್ರದ ಚಟುವಟಿಕೆ ತಿಳಿಸುವ ನಿಟ್ಟಿನಲ್ಲಿ ಮಾ. 16 ರಂದು ತಾಲೂಕಿನ ಸಂಭಾಪುರ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 15 ರಿಂದ 21ರ ವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರದಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಗುಜರಾತ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ 150 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮ ಹಾಗೂ ನೂತನ ಕಚೇರಿಯ ಉದ್ಘಾಟನೆಯನ್ನು ನೆಹರು ಯುವಕೇಂದ್ರ ಸಂಘಟನೆಯ ಮಹಾನಿರ್ದೇಶಕ ಸಲೀಂ ಅಹ್ಮದ್ ನೆರವೇರಿಸುವರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಜಿಲ್ಲಾ ಯುವಸಂಘ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ವಹಿಸುವರು.
ಮಾಜಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಸದಸ್ಯೆ ಚಂಬವ್ವ ಪಾಟೀಲ ಮುಂತಾದವರು ಉಪಸ್ಥಿತರಿರುವರು. ಜಿಲ್ಲೆಯ 20 ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದು. 2012-13ನೇ ಸಾಲಿನಲ್ಲಿ ಜಿಲ್ಲಾಯುವ ಸಂಘ ಪ್ರಶಸ್ತಿಗೆ ಆಯ್ಕೆಯಾದ ಸ್ಫೂರ್ತಿ ಯುವತಿ ಮಂಡಳಿ ಗದಗ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಆರ್.ಆರ್. ಮುತಾಲಿಕದೇಸಾಯಿ, ಮೃತ್ಯುಂಜಯ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.