ಯಾವಗಲ್ ಆರೋಪ ಸತ್ಯಕ್ಕೆ ದೂರು: ಪಾಟೀಲ್
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 13
ಚುನಾವಣೆ ಬಂದಾಗ ಬಿಜೆಪಿಯವರು ಗೂಂಡಾಗಿರಿ ಮಾಡುತ್ತಿದ್ದಾರೆ ಎನ್ನುವ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 15 ರಿಂದ 16 ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಆದರೆ, ಸ್ವ-ಪಕ್ಷದವರೇ ಬಿಎಸ್ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಳಗೊಳಗೆ ಬೆಂಬಲಿಸಿದ್ದರಿಂದ ಬಿಜೆಪಿಯ 3-4 ಅಭ್ಯರ್ಥಿಗಳು ಪರಾಭವಗೊಂಡರು. ಆದರೂ ಪಟ್ಟಣದ ಜನತೆ ನಮ್ಮ ಪಕ್ಷದ 12 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರತಿ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ಗೂಂಡಾಗಿರಿ ಮಾಡಿದ್ದಾರೆಂದು ಹೇಳಿಕೆ ನೀಡಿ, ಮತದಾರರನ್ನು ದಾರಿ ತಪ್ಪಿಸಲು ನೋಡುತ್ತಿದ್ದು, ಇದನ್ನರಿತ ಈ ಮತಕ್ಷೇತ್ರದ ಜನತೆ ಕಾಂಗ್ರೆಸ್ಗೆ ಸೋಲುಣಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಿದ್ದರೂ ಸಹ ಮಲಪ್ರಭಾ ಎಣ್ಣೆ ಗಿರಣಿಯನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡು ಚುನಾವಣೆ ಆಯೋಗದ ನಿಯಮಗಳನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು.
ಬಿ.ಆರ್. ಯಾವಗಲ್ ಅವರು ಮತದಾನ ಮಾಡಿದ ಮೇಲೆ ಮತದಾನ ನಡೆದ ಸ್ಥಳದಿಂದ ಹೊರಹೋಗದೇ, ಭೂತನಲ್ಲಿ ನಿಂತು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ವೇಳೆ ನಮ್ಮ ಕಾರ್ಯಕರ್ತರು ಕೇಳಿದ್ದನ್ನೇ ನೆಪವಾಗಿಟ್ಟುಕೊಂಡು, ನನ್ನ ಹಾಗೂ ನನ್ನ ಕಾರ್ಯಕರ್ತರ ಮೇಲೆ ಗೂಂಡಾಗಿರಿ ಮಾಡಿದ್ದಾರೆಂದು ಹೇಳಿರುವುದು ಸತ್ಯಕ್ಕೆ ದೂರದ ಮಾತು ಎಂದರು.
ಅಭಿವೃದ್ಧಿಗೆ ಆದ್ಯತೆ: ನರಗುಂದ ಪಟ್ಟಣ ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಟ್ಟು, ಎಲ್ಲ ಗ್ರಾಮಗಳನ್ನು ಅಭಿವೃದ್ಧಿಗೊಳಿಸಿಲು ಪ್ರಾಮಾಣಿಕೆ ಪ್ರಯತ್ನ ಮಾಡುತ್ತೇನೆ. ಶೀಘ್ರದಲ್ಲಿ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಭೂಮಿ ಪೂಜೆ. ಮತ್ತು ನೂತನವಾಗಿ ಪುರಸಭೆಗೆ ಆಯ್ಕೆಗೊಂಡ ಸದಸ್ಯರಿಗೆ ಸತ್ಕಾರ ಸಮಾರಂಭ ಏರ್ಪಡಿಸಲಾಗುವುದು ಎಂದರು. ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಮುತ್ತು ಜ್ಞಾನೋಪಂತ, ಸಿ.ವೈ. ದಂಡಿನ, ಸಮೀದ ಮುಲ್ಲಾ, ಮಹೇಶ ಹಟ್ಟಿ, ಕಿರಣ ಮುಧೋಳ, ಚಂದ್ರ ಪವಾರ, ಬಿ.ಕೆ. ಗುಜಮಾಗಡಿ, ಸಂಗಪ್ಪ ಪೂಜಾರ, ರಾಜುಗೌಡ ಪಾಟೀಲ, ಶ್ರೀನಿವಾಸ ಬೋನುಗೇರಿ, ಶಿವಪ್ಪ ಬೋಳಶಟ್ಟಿ, ಕೃಷ್ಣ ಗೊಂಬಿ, ಬಸವಣ್ಣವ್ವ ಪಿಡನಾಯ್ಕರ, ಎಲ್.ಎಂ. ಪಾಟೀಲ, ಸುರೇಶ ಹುಡೇದಮನಿ ಮುಂತಾದವರು ಉಪಸ್ಥಿತರಿದ್ದರು.