ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಲೆ ಆಡಳಿತ ಮಂಡಳಿ ಕ್ರಮಕ್ಕೆ ಖಂಡನೆ

Lingaraj Badiger
Updated On : 15 Mar 2013, 11:16 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ.14
ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಆದೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರದಿಂದ ಅನುಮೋದನೆಗೊಂಡ 6  ಶಿಕ್ಷಕರಿಗೆ 4-5 ವರ್ಷಗಳಿಂದ ಸಂಬಳ ನೀಡದೇ ಇವರ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿರುವ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಮಾಳ್ಹಸಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯ ಕ್ರಮ ಖಂಡಿಸಿ, ಮಂಗಳವಾರ ಶಿರಸ್ತೇದಾರ್ ಎಸ್.ಸಿ. ನದಾಫ ಅವರ ಮೂಲಕ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಶಿಕ್ಷಕರಿಗೆ ಬೆಂಬಲ ನೀಡಿ ಮಾತನಾಡಿ, ಸಂಸ್ಥೆಯ ಆಡಳಿತ ಮಂಡಳಿಯವರು 6-7 ವರ್ಷಗಳಿಂದ ವೇತನ ಇಲ್ಲದೇ ಸೇವೆ ಸಲ್ಲಿಸುತ್ತಾ ಬಂದಿರುವ ನೌಕರರನ್ನು ಕಡೆಗಣಿಸಿದ್ದಾರೆ. ಸೇವೆಗೆ ಸೇರುವ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಬೆಳವಣಿಗೆಗೆ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ತಲಾ ರು. 2 ಲಕ್ಷ ಕೇಳಿದಾಗ ಭವಿಷ್ಯದ ಹಿತದೃಷ್ಟಿಯಿಂದ ಹಣವನ್ನು ನೀಡಿದ್ದು, ಇಲಾಖೆಯಿಂದ ಅನುಮೋದನೆಗೊಂಡ ಮಾಳ್ಹಸಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 6  ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸುವ ಕ್ರಮಕ್ಕೆ ಮುಂದಾಗಿರುವುದನ್ನು ಖಂಡಿಸಿದರು.
ಆಡಳಿತ ಮಂಡಳಿ ಸೇವಾ ಭದ್ರತೆಯ ನಿಯಮಗಳನ್ನು ಪಾಲಿಸದೆ ಇಲಾಖೆ ಸೂಚನೆಗಳನ್ನು ಧಿಕ್ಕರಿಸಿ, ಅನುದಾನ ಸಿಗುವ ಸಂದರ್ಭದಲ್ಲಿ ಹೊಸಬರನ್ನು ನೇಮಿಸಿಕೊಳ್ಳುವ ಆತುರದಲ್ಲಿದ್ದಾರೆ. ಅಲ್ಲದೆ ಕೆಲವರನ್ನು ಸೇವೆಯಿಂದ ತೆಗೆದಿರುವುದಾಗಿ ತಿಳಿಸಿದ್ದು, 6 ಜನ ಅನುಮೋದಿಸಿದ ಶಿಕ್ಷಕರನ್ನು ಕೆಲಸಕ್ಕೆ ಹಾಜರಾಗದಂತೆ ತೊಂದರೆ ಕೊಡುತ್ತಿರುವ ಆಡಳಿತ ಮಂಡಳಿಯ ಕ್ರಮ ಸರಿಯಲ್ಲ ಎಂದು ದೂರಿದರು. ಶಿಕ್ಷಕ ಮಂಜುನಾಥ ಭ. ಪಾಟೀಲ, ಕೊಟ್ರಯ್ಯ ಸ. ಹೆಬ್ಬಾಳ ಮಾತನಾಡಿ, 2012ರ ಜೂನ್ ತಿಂಗಳಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳ ಮಾತುಕತೆಯಿಂದಾಗಿ ಸಂಸ್ಥೆಯ ಅಧ್ಯಕ್ಷ ರಾಮರಾವ್ ವೇರ್ಣೆಕರ್ ಶಿಕ್ಷಕರನ್ನು ಶಾಲೆಯಲ್ಲಿ ಸೇವೆಗೆ ಮುಂದುವರೆಸಿ, ಜತೆಗೆ ಅನುದಾನಕ್ಕೊಳಪಡಿಸುವ ಮೂಲಕ ವೇತನ ನೀಡುವ ಭರವಸೆ ನೀಡಿದ್ದರು. ಕೆಲ ತಿಂಗಳುಗಳ ನಂತರ ಮೊದಲಿನ ತಮ್ಮ ವರ್ತನೆಯನ್ನು ಮುಂದುವರಿಸಿ 6  ಶಿಕ್ಷಕರನ್ನು ಶಾಲೆಯಿಂದ ಹೊರಹಾಕುವ ಜತೆಗೆ ಅನೇಕ ಮಕ್ಕಳ ವರ್ಗಾವಣೆ ಪತ್ರ ಕಿತ್ತುಕೊಟ್ಟು ಅವರಿಗೆ ಬೇರೆ ಶಾಲೆಗೆ ಹೋಗುವಂತೆ ಮಾಡಿದ್ದಾರೆಂದು ದೂರಿದರು.
ಬೇಡಿಕೆಗಳು: ಇಲಾಖಾ ನಿಯಮದಂತೆ ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ನಂಬಿಸಿ ರು. 2 ಲಕ್ಷ ಹಣ ಪಡೆದುಕೊಂಡಿದ್ದು, ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಮನ್ನಣೆ ನವೀಕರಣ ಹಾಗೂ ಅನುದಾನಕ್ಕೆ ಒಳಪಡಿಸಲು ವಿನಂತಿಸಿ ಪ್ರಸ್ತಾವನೆಯನ್ನು ಕೂಡಲೇ ಇಲಾಖೆಗೆ ಕಳುಹಿಸಿಕೊಡಬೇಕು. ಇಲಾಖಾ ನಿರ್ದೇಶನದಂತೆ ಶಾಲಾ ಕೆಲಸಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲು ಶಿಕ್ಷಣ ಕಾಯ್ದೆ ಪ್ರಕಾರ ಇಲಾಖಾ ಅನುಮೋದನೆಯೊಂದಿಗೆ ಸೇವೆಯಲ್ಲಿರುವ 6 ಜನರಲ್ಲಿ ಜೇಷ್ಠತೆ ಆಧಾರದ ಮೇಲೆ ಹಿರಿಯರಾದವರಿಗೆ ಪ್ರಧಾನ ಗುರುಗಳ ಹುದ್ದೆ ನೀಡಬೇಕು.
ಇಲಾಖೆ ಅನುಮೋದನೆ ಪಡೆದು ಸೇವೆ ಸಲ್ಲಿಸುತ್ತಿದ್ದು, ಸೇವಾ ಭದ್ರತೆ ಒದಗಿಸಿ ಸೇವೆಯಲ್ಲಿ ಮುಂದುವರೆಯುವಂತೆ ಅವಕಾಶ ನೀಡಬೇಕು. ನೇಮಕಾತಿ ದಿನಾಂಕದಿಂದ ಇಲ್ಲಿಯವರೆಗೆ ಬಾಕಿ ಉಳಿದ ವೇತನವನ್ನು ಆಡಳಿತ ಮಂಡಳಿ ತಕ್ಷಣವೇ ಪಾವತಿಸಬೇಕು. ವಾರದೊಳಗಾಗಿ ಎಲ್ಲ ಬೇಡಿಕೆಗಳನ್ನು ಆಡಳಿತ ಮಂಡಳಿ ಅಧ್ಯಕ್ಷ ರಾಮರಾವ ವೆರ್ಣೇಕರ ಈಡೇರಿಸದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದೆದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶಿಕ್ಷಕರಾದ ಮಂಜುನಾಥ ಭ. ಪಾಟೀಲ, ಚನ್ನಬಸಯ್ಯ ಬ. ಘಟ್ಟಿಮಠ, ಮಂಗಳಗೌರಿ ಎಸ್. ಪಾಟೀಲ, ಶಾಂತಾ ಆರ್.ಎಂ, ಕೊಟ್ರಯ್ಯ ಸ. ಹೆಬ್ಬಾಳ, ಶಂಕ್ರಪ್ಪ ದೇ. ಕಾರಬಾರಿ ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement