ಇಂದು ಚಿಕ್ಕನರಗುಂದದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
ನರಗುಂದ: ಕಸಾಪ ಕೇಂದ್ರ ಘಟಕ, ಜಿಲ್ಲಾ ಘಟಕ ಹಾಗೂ ನರಗುಂದ ಘಟಕಗಳ ಆಶ್ರಯದಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಮಾ. 16 ರಂದು ನರಗುಂದ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪದ ನರಗುಂದ ತಾಲೂಕು ಅಧ್ಯಕ್ಷ ಪಿ.ಸಿ. ಕಲಹಾಳ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ. 16ರ ಬೆಳಗ್ಗೆ 8 ಗಂಟೆಗೆ ಚಿಕ್ಕನರಗುಂದದ ಬಸವೇಶ್ವರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ವೀರಬಾಬಾಸಾಹೇಬ ಮಹಾವೇದಿಕೆಯ ಶ್ರೀಧರಾಚಾರ್ಯ ಮಹಾ ಮಂಟಪದಲ್ಲಿ ಶಾಸಕ ಸಿ.ಸಿ.ಪಾಟೀಲ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8.30 ಗಂಟೆಗೆ ತಾಯಿ ಭುವನೇಶ್ವರಿದೇವಿ ಹಾಗೂ ಸಮ್ಮೇಳನಾಧ್ಯಕ್ಷ ಮಲಕಪ್ಪ ದಿಬ್ಬದರವರ ಮೆರವಣಿಗೆಗೆ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ಚಾಲನೆ ನೀಡುವರು. ತಾಪಂ ಅಧ್ಯಕ್ಷ ಗುರಪ್ಪ ಆದೆನವರ, ಗ್ರಾಪಂ ಅಧ್ಯಕ್ಷ ಶಿವರಡ್ಡಿ ತಿಮ್ಮರಡ್ಡಿ, ತಾಪಂ ಸದಸ್ಯೆ ವಿದ್ಯಾವತಿ ಭೂಮಣ್ಣವರ, ಗ್ರಾಪಂ ಉಪಾಧ್ಯಕ್ಷರಾದ ಗದಿಗೆವ್ವ ಚನ್ನಪ್ಪಗೌಡರ ಉಪಸ್ಥಿತರಿರುವರು. ಬೆಳಗ್ಗೆ 10.30 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸಾನ್ನಿಧ್ಯವನ್ನು ಪಂಚಗ್ರಹ ಗುಡ್ಡದ ಹಿರೇಮಠದ ಅಭಿನವ ಶಿದ್ಧಲಿಂಗ ಶಿವಚಾರ್ಯರು, ವಿರಕ್ತಮಠದ ಚನ್ನಬಸವ ಶ್ರೀಗಳು ವಹಿಸುವರು. ಶಾಸಕ ಸಿ.ಸಿ. ಪಾಟೀಲ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷ ಮಲಕಪ್ಪ ದಿಬ್ಬದ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ಬಿ.ಆರ್. ಯಾವಗಲ್, ಡಾ. ಕಿರಣ ರಾಯ್ಕರರ ಶರಣರ ವಚನಗಳಲ್ಲಿ ಕುಲ-ಜಾತಿಯ ಪರಿಕಲ್ಪನೆ ಗ್ರಂಥ ಬಿಡುಗಡೆ ಮಾಡುವರು. ಅತಿಥಿಗಳಾಗಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಂಗಮೇಶ ಬಾದವಾಡಗಿ, ರಾಮಕೃಷ್ಣೇಗೌಡ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಎಸ್. ಕರಿಗೌಡರ ಮುಂತಾದವರು ಉಪಸ್ಥಿತರಿರುವರೆಂದು ತಿಳಿಸಿದ್ದಾರೆ.
ಇಂದು ನಗರಕ್ಕೆ ಸಲೀಂ ಅಹ್ಮದ್
ಗದಗ: ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಮಹಾನಿರ್ದೇಶಕ ಸಲೀಂ ಅಹ್ಮದ್ ಮಾ. 16ರ 12.30 ಗಂಟೆಗೆ ಸಂಭಾಪುರಕ್ಕೆ ಆಗಮಿಸಿ, ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 3 ಗಂಟೆಗೆ ಮುಂಡರಗಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಜನತಾ ಪ್ಲಾಟ್, ರೆಹಮತ್ ನಗರ, ಕುಷ್ಟಗಿಚಾಳ, ಕುಷ್ಟರೋಗ ಕಾಲೋನಿ, ಅಂಬೇಡ್ಕರ ನಗರ, ಹನುಮನ ಗರಡಿ, ದ್ರೌಪದಿ ಲೈನ್, ಪಲ್ಲೇದ ಲೈನ್, 2ನೇ ನಂಬರ ಶಾಲೆ, ಅರಸಿದ್ಧಿ ಲೈನ್, ನರಿಬಾವಿ ಓಣಿ, ಹೊಂಬಾಳಿ ರೋಡ್, ಜನತಾ ಕಾಲೋನಿ, ವಿ.ಎನ್.ಟಿ. ರೋಡ್ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.