ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹವಾಮಾನ ಮುನ್ಸೂಚನೆ ಸಹಕಾರಿ

Lingaraj Badiger
Updated On : 16 Mar 2013, 11:29 am

ಕನ್ನಡಪ್ರಭ ವಾರ್ತೆ, ಗದಗ, ಮಾ. 15
ಹವಾಮಾನ ವೈಪರೀತ್ಯದಿಂದಾಗುವ ಅನಾಹುತಗಳ ಕುರಿತು ಮುಂಜಾಗೃತೆ ಹೊಂದಲು ಹಮಾಮಾನ ವಿಕೋಪಗಳ ಮುನ್ಸೂಚನೆ ನೀಡುವ ಕ್ಷೇತ್ರ ನಿರ್ವಹಣಾ ಕೇಂದ್ರ (ಎಫ್‌ಎಂಸಿ) ಇಲಾಖೆಯ ಮಾಹಿತಿ ಸಹಕಾರಿಯಾಗಿದೆ ಎಂದು ಹವಾಮಾನ ಇಲಾಖೆಯ ಚೆನ್ನೈನ ವಿಭಾಗೀಯ ನಿರ್ದೇಶಕ, ವಿಜ್ಞಾನಿ ಡಾ. ವೈ.ಎ.ಆರ್. ರಾಜ್ ಹೇಳಿದರು.
ಅವರು ಶುಕ್ರವಾರ ನಗರದ ಸಂಭಾಪುರ ರಸ್ತೆಯಲ್ಲಿ ನಿರ್ಮಿಸಲಾಗಿರುವ ಹವಾಮಾನ ಇಲಾಖೆಯ ಕ್ಷೇತ್ರ ನಿರ್ವಹಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದು ದೇಶದಲ್ಲಿ ಹಲವು ರೀತಿಯ ಹವಾಮಾನ ವೈಪರೀತ್ಯಗಳುಂಟಾಗುತ್ತಿದ್ದು, ಇದನ್ನು ತಡೆಗಟ್ಟವುದು ಅಸಾಧ್ಯವಾಗಿದೆ. ಒಮ್ಮಿಂದೊಮ್ಮೆಲೆ ಬಂದೊದಗುವ ಹವಾಮಾನ ವೈಪರೀತ್ಯಗಳ ಕುರಿತು ಸಾರ್ವಜನಿಕರಿಗೆ, ಹಾಗೂ ಸರ್ಕಾರಕ್ಕೆ ಮಾಹಿತಿ ನೀಡುವ ಕಾರ್ಯವನ್ನು ಹವಾಮಾನ ಇಲಾಖೆ ಮಾಡುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಕೋಟಿ ಆಸ್ತಿ ಹಾನಿಯಾಗಿತ್ತು. ಈ ಕುರಿತು ಹವಾಮಾನ ಇಲಾಖೆ ಪ್ರವಾಹವು ಉಂಟಾಗುವ ಮೊದಲೇ ಮಾಹಿತಿ ನೀಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ರಾಜ್ಯಾದ್ಯಂತ ಹವಾಮಾನ ಕುರಿತು ಮಾಹಿತಿ ನೀಡುವ ಎಫ್‌ಎಂಸಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. 2012ನೇ ಸಾಲಿನ ಆಗಸ್ಟ್ 12 ರಂದು ಗುಲ್ಬರ್ಗಾದಲ್ಲಿ ಪ್ರಥಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಂತರ ಇಂದು ಗದಗನಲ್ಲಿ 2ನೇ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಇದು ರಾಜ್ಯದಲ್ಲಿ ದ್ವಿತೀಯ ಕೇಂದ್ರವಾಗಿದ್ದು, ಇದೇ ರೀತಿ ರಾಜ್ಯಾದ್ಯಂತ ಎಫ್‌ಎಂಸಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
ಪ್ರತಿ ಗಂಟೆಗೆ ಒಂದು ಬಾರಿ ಈ ಕೇಂದ್ರವು ಉಪಗ್ರಹಕ್ಕೆ ಮಾಹಿತಿಯನ್ನು ರವಾನಿಸುತ್ತದೆ. ಅದನ್ನು ತಕ್ಷಣದಲ್ಲಿಯೇ ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತರೂ ಅಂತರ್ಜಾಲದ ಮೂಲಕ ಮಾಹಿತಿ ಪಡೆದುಕೊಳ್ಳುವ ತಂತ್ರಾಂಶ ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ಜಿಲ್ಲೆಯ ಹವಾಮಾನ ಕುರಿತು ಕ್ಷಣಾರ್ಧದಲ್ಲಿಯೇ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಸಾರ್ವಜನಿಕರು ಅದರಲ್ಲಿಯೂ ವಿಶೇಷವಾಗಿ ರೈತರು ಹೆಚ್ಚಾಗಿ ಈ ಹವಾಮಾನ ಇಲಾಖೆಗೆ ದೂರವಾಣಿಯ ಮೂಲಕ ತಮ್ಮ ಭಾಗದ ಹವಾಮಾನ ಕುರಿತು ಮಾಹಿತಿ ಪಡೆಯುತ್ತಿರುವುದು ಸಂತಸ ತಂದಿದೆ. ಇದೇ ರೀತಿ ದಿನೇ ದಿನೇ ಹವಾಮಾನ ಇಲಾಖೆಯು ನೂತನ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಷಣಾರ್ಧದಲ್ಲಿಯೇ ಸಾರ್ವಜನಿಕರಿಗೆ ಮಾಹಿತಿ ಒದಗಿಸುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮಾತನಾಡಿ, ವಾತಾವರಣದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯಗಳ ಕುರಿತು ಮಾಹಿತಿ ನೀಡಲು ಈ ಹವಾಮಾನ ಇಲಾಖೆಯ ಪಾತ್ರ ಪ್ರಮುಖವಾಗಿದೆ.
ಸಾರ್ವಜನಿಕರ ಜೀವಹಾನಿ, ಆಸ್ತಿಹಾನಿ ಸೇರಿದಂತೆ ಇತರೆ ಅವಘಡಗಳನ್ನು ತಪ್ಪಿಸಲು ಈ ಇಲಾಖೆ ಕಾರ್ಯ ಆವಶ್ಯಕವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಹವಾಮಾನ ಇಲಾಖೆಯ ಬಿ. ಪುಟ್ಟಣ್ಣ, ಡಾ.ಆರ್. ಅಶೋಕನ್, ಪ್ರಕಾಶ ಚಂದನ್ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವಿ. ಬಾಲಸುಬ್ರಹ್ಮಣ್ಯಂ, ಡಿವೈಎಸ್‌ಪಿ ವಿ.ವಿ. ಕುಂಬಾರ, ಡಾ. ಎಂ.ಬಿ. ಪಾಟೀಲ, ರಾಜಶೇಖರ ಶಿರೂರ ಮುಂತಾದವರು ಉಪಸ್ಥಿತರಿದ್ದರು. ಡಾ. ರಾಜು ರೋಖಡೆ ಸ್ವಾಗತಿಸಿ, ವಂದಿಸಿದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement