ಪೌರ ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಮಾ. 16
ಕಳೆದ 2 ತಿಂಗಳಿನಿಂದ ವೇತನ (ಸಂಬಳ) ನೀಡದೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಸತಾಯಿಸುತ್ತಿದ್ದಾರೆ. ಇದರಿಂದ ನಿತ್ಯ ಜೀವನ ನಡೆಸುವುದು ದುಸ್ತರವಾಗಿದೆ. ವೇತನ ನೀಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪುರಸಭೆಯ ಕಾರ್ಮಿಕರು ಮತ್ತು ಕಚೇರಿ ಸಿಬ್ಬಂದಿ ಶನಿವಾರ ಆಕ್ರೋಶಗೊಂಡು ಪಟ್ಟಣದ ಪುರಸಭೆಗೆ ಬೀಗ ಜಡಿದು ಪ್ರತಿಭಟಿಸಿದರು.
ಜೀವನ ನಡೆಸುವುದೇ ಕಷ್ಟಕರವಾದ ಇಂತಹ ಸಮಯದಲ್ಲಿ ವೇತನ ನೀಡದಿರುವುದರಿಂದ ತೊಂದರೆಯಾಗುತ್ತಿದೆ. ಇಂದು, ನಾಳೆ ಕೊಡಲಾಗುವುದು ಎಂದು ಹೇಳುತ್ತಾ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಚುನಾವಣೆ ನೆಪವೊಡ್ಡಿ ಮುಂದೂಡುತ್ತಾ ಬಂದಿದ್ದಾರೆ. ಇವರ ವರ್ತನೆ ಖಂಡನೀಯವಾಗಿದೆ ಎಂದು ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಬಾರಿ ಮುಖ್ಯಾಧಿಕಾರಿಗೆ ನಮ್ಮ ಸಮಸ್ಯೆ ತಿಳಿಸಿದರೂ ನಮಗೆ ಸ್ಪಂದಿಸದೆ ಜಿಲ್ಲಾಧಿಕಾರಿಯವರು ಸಹಿ ಮಾಡುತ್ತಿಲ್ಲ, ಎಸಿ ಅವರ ಕಚೇರಿಗೆ ಹೋಗಿದ್ದೆ, ಅವರು ಸಹಿ ಮಾಡುತ್ತಿಲ್ಲ. ನಾನೇನು ಮಾಡಲಿ ಎಂದು ಮುಖ್ಯಾಧಿಕಾರಿ ಹಾರಿಕೆ ಉತ್ತರ ನೀಡುತ್ತಾರೆ. ಬಡ ಕಾರ್ಮಿಕರಿಗೆ ಹಿರಿಯ ಅಧಿಕಾರಿಗಳ ಹೆಸರು ಹೇಳಿ ಬೆದರಿಸುತ್ತಾರೆ. ಸಮಸ್ಯೆ ಇತ್ಯರ್ಥವಾಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದ ರು. ಪ್ರತಿಭಟನಾಕಾರರ ಜತೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ದೂರವಾಣಿ ಮೂಲಕ ಮಾತನಾಡಿ, ಸೋಮವಾರ ವೇತನ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ನಿಂಗಪ್ಪ ದೊಡ್ಡಮನಿ, ನಿಂಗಪ್ಪ ಮಾದರ, ಯಮನಪ್ಪ ಚಲವಾದಿ, ಹನುಮಪ್ಪ ಹಾದಿಮನಿ, ಬಸವರಾಜ ಜೋಗಣ್ಣವರ, ಮೈಲಾರಪ್ಪ ಹಿರೇಮನಿ, ದ್ಯಾಮಣ್ಣ ಕೊಪ್ಪದ, ಹನುಮಂತ ಮುದೇನಗುಡಿ ಅನೇಕ ಪೌರ ಕಾರ್ಮಿಕರು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.