ಆತಂಕದಲ್ಲಿ ಅರಹುಣಸಿ ಜನತೆ
ರೋಣ: ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಭಾನುವಾರ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರಿಂದ ಆತಂಕಗೊಂಡ ಗ್ರಾಮದ ಜನತೆ ನೀರು ಕುಡಿಯಲು ಹಿಂಜರಿಯುತ್ತಿದ್ದಾರೆ.
ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಅರಹುಣಸಿ ಗ್ರಾಮವು 4 ಗ್ರಾಪಂ ಸದಸ್ಯರನ್ನು ಹೊಂದಿದ್ದು, 2500 ಜನ ಸಂಖ್ಯೆಯನ್ನು ಹೊಂದಿದೆ. ಪೂರೈಕೆಯಾಗುತ್ತಿರುವ ನೀರು ಮಾತ್ರ ಶುದ್ಧವಿಲ್ಲ. 5 ವರ್ಷಗಳಿಂದ ಗ್ರಾಮದ ಜನತೆ ನೀರು ಕುಡಿದು ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಾ ಬಂದಿದ್ದಾರೆ. ಈ ಹಿಂದೆ ಗ್ರಾಪಂನವರು ನೀರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಕುಡಿಯಲು ಅಶುದ್ಧ ಮತ್ತು ಪ್ಲೋರೈಡ್ ಅಂಶದಿಂದ ಕೂಡಿದೆ ಎಂದು ದೃಢಪಟ್ಟಿದ್ದರೂ ಗ್ರಾಪಂನವರು ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲ.
ಅಶುದ್ಧ ನೀರು ಪೂರೈಕೆ: ಪೂರೈಕೆಯಾಗುತ್ತಿರುವ ನೀರು ಸವುಳು ಮತ್ತು ಗಡಸು ಮಿಶ್ರಿತವಾಗಿದೆ. ಕುಡಿಯಲು ಯೋಗ್ಯವಾಗಿಲ್ಲ. ಆದರೂ ಗ್ರಾಮಸ್ಥರು ಅನಿವಾರ್ಯವಾಗಿ ಅದೇ ನೀರನ್ನೆ ಕುಡಿಯುತ್ತಿದ್ದಾರೆ. ಕೆಲವರು ಪಟ್ಟಣಗಳಿಗೆ ತೆರಳಿ ದುಬಾರಿಯಾದ ಶುದ್ಧ ನೀರನ್ನು ತಂದು ಕುಡಿಯುತ್ತಿದ್ದಾರೆ.
ಶುದ್ಧೀಕರಣ ಘಟಕಕ್ಕೆ ಆಗ್ರಹ: ಘಟನೆ ತಿಳಿಯುತ್ತಿದಂತೆ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಸ್.ಆರ್. ಕಡಿವಾಲ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಜಿಪಂ ಎಇಇ ವಿ.ಕೆ. ಕಾಳಪ್ಪನವರ ಅವರಿಗೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ನಾವು ಗ್ರಾಪಂನವರು ಪೂರೈಸುತ್ತಿರುವ ಅಶುದ್ಧ ನೀರನ್ನು ಕುಡಿಯುವುದಿಲ್ಲ. ಶುದ್ಧ ಮತ್ತು ಪ್ಲೋರೈಡ್ ಮುಕ್ತ ನೀರು ಪೂರೈಸಬೇಕು ಎಂದು ಗ್ರಾಮದ ಅಡಿವೆಪ್ಪ ಘಾಟಿಗೆ, ಪಂಪನಗೌಡ ಪಾಟೀಲ, ಎಚರಪ್ಪ ಕಮ್ಮಾರ, ಶಂಬಾಜಿ ಆರೇರ ಒತ್ತಾಯಿಸಿದರು.
ಅರಹುಣಸಿಗೆ ಪೂರೈಕೆಯಾಗುತ್ತಿರುವ ನೀರನ್ನು ಅನೇಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ಲೋರೈಡ್ ಅಂಶ ಹೆಚ್ಚಾಗಿರುವುದು ದೃಢಪಟ್ಟಿದೆ. ಗ್ರಾಪಂನವರಿಗೆ ನಮ್ಮ ಇಲಾಖೆಯಿಂದ ಅನೇಕ ಬಾರಿ ಲಿಖಿತ ಮತ್ತು ಮೌಖಿಕವಾಗಿ ತಿಳಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಯಪಡುವ ಅಗತ್ಯವಿಲ್ಲ. ಕಲುಷಿತ ನೀರು ಸೇವನೆಯಿಂದ ಹೀಗಾಗಿದೆ. ಆದಷ್ಟು ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
- ಡಾ. ಎಚ್.ಎಲ್. ಗಿರಡ್ಡಿ
ರೋಣ ತಾಲೂಕು ವೈದ್ಯಾಧಿಕಾರಿ
ಗ್ರಾಮದ ನೈರ್ಮಲ್ಯ ಮತ್ತು ಶುದ್ಧ ನೀರು ಪೂರೈಕೆ ಮಾಡಲು ಗ್ರಾಪಂ ಪಿಡಿಓ ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು. ನೀರು ಶುದ್ಧೀಕರಿಸಲು ಪೌಡರ ಬಳಕೆಗೆ ಸೂಚಿಸಲಾಗುವುದು. ಮತ್ತೊಮ್ಮೆ ಇಂಥಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಎಸ್.ಎಂ. ರುದ್ರಸ್ವಾಮಿ
ರೋಣ ತಾಪಂ ಇಓ