ಕಲುಷಿತ ನೀರು ಸೇವಿಸಿ 40 ಜನ ಅಸ್ವಸ್ಥ
ಕನ್ನಡಪ್ರಭ ವಾರ್ತೆ, ರೋಣ, ಮಾ. 17
ಕಲುಷಿತ ನೀರು ಕುಡಿದು ತಾಲೂಕಿನ ಅರಹುಣಸಿ ಗ್ರಾಮದ 40ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಉಂಟಾಗಿದ್ದು, ಅವರನ್ನು ಪಟ್ಟಣದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಕ್ಕೆ ನೀರು ಪೂರೈಸುವ ಎರಡು ಟ್ಯಾಂಕ್‌ಗಳನ್ನು ವರ್ಷದಿಂದ ಸ್ವಚ್ಛಗೊಳಿಸಿರಲಿಲ್ಲ. ನೀರು ಶುದ್ಧೀಕರಣದ ಪೌಡರ್ ಹಾಕಿಲ್ಲ. ವಾಲ್ವ್ ಸುತ್ತ ಗಲೀಜು ತುಂಬಿತ್ತು. ಅದರಲ್ಲೇ ಚಪ್ಪಲಿ, ಕಸ-ಕಡ್ಡಿ, ಸಾರಾಯಿ ಬಾಟಲ್, ಪೌಚ್‌ಗಳು, ಕಬ್ಬಿಣದ ಚೂರುಗಳು ಬಿದ್ದಿವೆ. ಕಲುಷಿತಗೊಂಡ ನೀರನ್ನು ಗ್ರಾಮಸ್ಥರು ಕುಡಿದು ಅಸ್ವಸ್ಥರಾಗಿದ್ದಾರೆ.
ಟ್ಯಾಂಕ್ ಸ್ವಚ್ಛ ಮಾಡದೇ ಇರುವುದಕ್ಕೆ ಗ್ರಾಪಂ ನಿರ್ಲಕ್ಷ್ಯವೇ ಕಾರಣ. ಇಷ್ಟೆಲ್ಲ ಆದರೂ ಗ್ರಾಪಂ ಅಧಿಕಾರಿಗಳು ಅಥವಾ ಸದಸ್ಯರು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೋಶಿ ಆಸ್ಪತ್ರೆಗೆ ದಾಖಲು: ಎರಡು ದಿನಗಳಿಂದ ಗ್ರಾಮದ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ರೋಣ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಿದ್ದಾರೆ. ಭಾನುವಾರ ಒಮ್ಮೆಲೇ 40ಕ್ಕೂ ಅಧಿಕ ಜನರು ಅಸ್ವಸ್ಥರಾದ ಕಾರಣ ಆರೋಗ್ಯರಕ್ಷಾ ಕವಚ ಆ್ಯಂಬುಲೆನ್ಸ್ ಮೂಲಕ ರೋಣದ ಡಾ ಭೀಮಸೇನ ಜೋಶಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಹುಣಸಿ ಗ್ರಾಮದ ಮಲ್ಲಮ್ಮ ಸುಳ್ಳದ (45), ಕಸ್ತೂರೆವ್ವ ಸುಳ್ಳದ (34), ಗೌರವ್ವ ಬಾನಾಪುರ (25), ಚಂದ್ರಪ್ಪ ಹೆಬ್ಬಳ್ಳಿ (60), ನಾಗರಾಜ ಹೆಬ್ಬಳ್ಳಿ (25), ಶರಣಪ್ಪ ಹೆಬ್ಬಳ್ಳಿ (22) ಮತ್ತು ಯಲ್ಲವ್ವ ಕನ್ನೂರ (45) ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಕಲುಷಿತ ನೀರು ಸೇವನೆಯಿಂದಾದ ತೊಂದರೆ ಎಂದು ರೋಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ ಎಚ್.ಎಲ್. ಗಿರಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಖಾಸಗಿ ಆಸ್ಪತ್ರೆಗೂ ದಾಖಲು: ಸರ್ಕಾರಿ ಆಸ್ಪತ್ರೆ ಹೊರತುಪಡಿಸಿ 30ಕ್ಕೂ ಹೆಚ್ಚು ಜನ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆಯಿಂದ ಆತಂಕ ಮೂಡಿದೆ. ಜನತೆ ಗ್ರಾಮದ ನೀರನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದಾರೆ.