ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಅವಶ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 17
ವಿದ್ಯಾರ್ಥಿಗಳು ಪಠ್ಯದ ಜತೆ ಕ್ರಿಯಾಶೀಲತೆ ಮೈಗೂಡಿಸಿಕೊಂಡು ವಿದ್ಯೆ ಸಂಪಾದಿಸಿ, ದೇಶದ ಸಮರ್ಥ ನಾಯಕರಾಗಿ ಹೊರಹೊಮ್ಮಿ ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರ ಅತ್ಯಂತ ಸ್ಪರ್ಧೆಯಿಂದ ಕೂಡಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಸಿದ್ಧರಾಗಬೇಕು. ಜತೆಗೆ ಶಿಕ್ಷಕರು, ಪಾಲಕರು ಅವರಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿ ಜೀವನದ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನಡುವೆ ಅವಿನಾಭಾವ ಮೂಡಿದಾಗ ಮಾತ್ರ ಶೈಕ್ಷಣಿಕ ರಂಗದ ಪ್ರಗತಿ ಸಾಧ್ಯ ಎಂದರು.
ಮುಖ್ಯೋಪಾಧ್ಯಾಯ ಎಂ.ಡಿ. ಸರಕಾವಸ ಮಾತನಾಡಿದರು. ಇದೇ ಸಂಧರ್ಭದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಲ್ಲದೆ ಶಾಲೆಗೆ ಸ್ಥಿರ ನಿಧಿ ಸ್ಥಾಪಿಸಿದ ಸಂಯುಕ್ತಾ ಬಂಡಿ, ರೇಣುಕಾ ಗೌಡರ, ರಾಜೇಸಾಬ ಸಾಂಗ್ಲೀಕಾರ ಹಾಗೂ ಪುರಸಭೆಯ ನೂತನ ಸದಸ್ಯೆ ಕವಿತಾ ಜಾಲಿಹಾಳ ಅವರನ್ನು ಸತ್ಕರಿಸಲಾಯಿತು. ಎಸ್.ಎಂ. ಭೂಮರಡ್ಡಿ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆ, ಎಸ್.ಎಫ್. ಜಾಲಿಹಾಳ, ವಿ.ಬಿ. ಸಂಗನಾಳ, ಶ್ಯಾಮಿದಅಲಿ ದಿಂಡವಾಡ, ಎಂ.ಕೆ. ತಟಗಾರ, ಶ್ಯಾಮ ಶಿಂಗ್ರಿ, ಅಕ್ಕಮಹಾದೇವಿ ಬಡಿಗೇರ ಉಪಸ್ಥಿತರಿದ್ದರು. ಎ.ಬಿ. ರಡ್ಡೇರ ಸ್ವಾಗತಿಸಿದರು. ಎ.ಎಂ. ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು. ಎಂ.ಝಡ್. ಬೇಲೇರಿ ವಂದಿಸಿದರು.