ಸಾಹಿತ್ಯಕ್ಕೆ ಮಠಗಳ ಕೊಡುಗೆ ಪಾರ: ಶಿಲಾಕಾಂತ ಪತ್ತಾರ
ನರೇಗಲ್ಲ: ನಾಡಿನ ಮಠಮಾನ್ಯಗಳು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿವೆ. ಸಾಹಿತ್ಯ ಸರ್ವರಿಗೂ ಹಿತವನ್ನುಂಟು ಮಾಡುತ್ತದೆ ಎಂದು ಬಾದಾಮಿಯ ನಿವೃತ್ತ ಪ್ರಾಧ್ಯಾಪಕ ಡಾ ಶಿಲಾಕಾಂತ ಪತ್ತಾರ ಹೇಳಿದರು. ಸಮೀಪದ ನಿಡಗುಂದಿಕೊಪ್ಪದಲ್ಲಿ ಲಿಂ. ಹಾನಗಲ್ಲ ಕುಮಾರೇಶ್ವರರ 83ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ನಡೆದ ಸಂಸ್ಮರಣಾ ಸಭೆಯಲ್ಲಿ ಅವರು ಮಾತನಾಡಿದರು. ಸುಖದ ಅನುಭವ ನಮಗೆ ಇಂದ್ರಿಯಗಳ ಮೂಲಕ ದೊರೆತರೆ ಆನಂದಾನುಭವ ಮನಸ್ಸಿನ ಮೂಲಕ ಸಿಗುತ್ತದೆ. ಸುಖವಲ್ಲ, ಆನಂದವೇ ನಮ್ಮ ಜೀವನದ ಮುಖ್ಯ ಗುರಿಯಾಗಿರಬೇಕು. ಸಂಸ್ಮರಣೆ ಮಾಡುವುದೆಂದರೆ ಹಿರಿಯರ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಒಂದು ಉತ್ತಮ ಅವಕಾಶ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಳ್ಳುವ ಮೊದಲು ನಾವೂ ಮಾನಸಿಕ ಸಿದ್ಧತೆ ಮಾಡಿಕೊಂಡು ಬರಬೇಕು ಎಂದರು. ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ಯಲಬುರ್ಗಾದ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಡಾ ಎಸ್.ಜಿ. ಗುರಿಕಾರ ಮತ್ತು ನರೇಗಲ್ಲದ ಓಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿವರನ್ನು ಶಿವಬಸವ ಶ್ರೀಗಳು ಸನ್ಮಾನಿಸಿದರು. ಸಾನ್ನಿಧ್ಯವನ್ನು ಸಿದ್ದೇಶ್ವರ ಶ್ರೀಗಳು ವಹಿಸಿದ್ದರು. ಶಿಕ್ಷಕ ಅಂದಪ್ಪ ವಿವೇಕಿ ಮತ್ತು ರಾಜಶ್ರೀ ಕುಲಕರ್ಣಿ ಅವರಿಂದ ಸಂಗೀತವಿತ್ತು. ಶಿಕ್ಷಕ ಆರ್.ವಿ. ಬೆಲ್ಲದ ನಿರೂಪಿಸಿ, ವಂದಿಸಿದರು.