ಸುದ್ದಿ ಸಂಕ್ಷೇಪ
ನಾಳೆಯಿಂದ ರೋಣ ತಾಲೂಕಲ್ಲಿ ಕ್ಷೇತ್ರ ಪ್ರಚಾರ
ಗದಗ: ಜಿಲ್ಲೆಯ ರೋಣ ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಮಾ. 18ರಿಂದ 27ರ ವರೆಗೆ ಜಿಲ್ಲಾ ವಾರ್ತಾ ಇಲಾಖೆ, ಜಿಪಂ ಗದಗ, ತಾಪಂ ರೋಣ ಮತ್ತು ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಂದಾಯ ಇಲಾಖೆಯು ನಿಗದಿಪಡಿಸಿದ ಗ್ರಾಪಂ, ಸ್ಥಳೀಯ ಸಂಘ ಸಂಸ್ಥೆಯವರ ಇವರ ಸಹಕಾರದೊಂದಿಗೆ ಸರ್ಕಾರವು ರೂಪಿಸಿರುವ ವಿವಿಧ ಯೋಜನೆಗಳ ಕುರಿತಾದ ಜನಪದ ಸಂಗೀತ ಹಾಡು ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನ, ವಸ್ತುಫಲಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಾ. 18ರಿಂದ 22ರ ವರೆಗೆ ರಾಜೂರ, ಕಾಲಕಾಲೇಶ್ವರ, ಭೈರಾಪುರ, ದಿಂಡೂರ, ಹಿರೇಕೊಪ್ಪ, ರಾಮಾಪುರ, ಕೊಡಗಾನೂರ, ಹೊಸರಾಮಾಪುರ ಹಾಗೂ ನಾಗರಸಕೊಪ್ಪ, ಗೋಗೇರಿ ಈ ಎಲ್ಲಾ ಗ್ರಾಮಗಳಲ್ಲಿ ಜನಪದ, ಗೀಗೀ ಹಾಡು ಕಾರ್ಯಕ್ರಮವನ್ನು ಕಲಾವಿದ ರೋಣ ಜಿಲ್ಲೆಯ ಮೆಣಸಗಿ ಗ್ರಾಮದ ನಿಂಗಬಸಪ್ಪ ದಿಂಡೂರ ಅವರಿಂದ ಗೀಗೀಪದ, ಜಾನಪದ ಜರುಗುವುದು. ಮಾ. 23ರಿಂದ 27ರ ವರೆಗೆ ಮಾಟರಂಗಿ, ನಾಗರಸಕೊಪ್ಪತಾಂಡೆ, ಲಕ್ಕಲಕಟ್ಟಿ, ಅಮರಕಟ್ಟಿ, ರುದ್ರಾಪುರ, ನಾಗೇಂದ್ರಗಡ, ಬೊಮ್ಮಸಾಗರ, ಶಾಂತಗೇರಿ, ನೆಲ್ಲೂರ, ಮುಶಿಗೇರಿ ಈ ಗ್ರಾಮಗಳಲ್ಲಿ ಸರ್ಕಾರದ ಯೋಜನೆ, ಜನಜಾಗೃತಿ ಕುರಿತಾದ ಬೀದಿ ನಾಟಕ ಪ್ರದರ್ಶನವನ್ನು ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಜೈ ಕಿಸಾನ್ ಯುವ ಮಂಡಳದ ವತಿಯಿಂದ ಪ್ರದರ್ಶನ ಜರುಗಲಿದೆ. ಮೊದಲನೇ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ 2ನೇ ಗ್ರಾಮದಲ್ಲಿ ಸಂಜೆ 7 ಗಂಟೆಗೆ ಎಂದು ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದ ಅರಿವು ಅತ್ಯಗತ್ಯ
ಗದಗ: ವೈದ್ಯಕೀಯ ಜ್ಞಾನದ ಅರಿವಿನ ಕೊರತೆಯಿಂದಾಗಿ ಇಂದು ವೈದ್ಯರ ಮೇಲೆ ನಿರ್ಲಕ್ಷ್ಯದ ಆರೋಪಗಳು ಅಧಿಕವಾಗುತ್ತಿದ್ದು, ಇದರ ನಿವಾರಣೆಗಾಗಿ ಜನಸಾಮಾನ್ಯರಿಗೆ ವೈದ್ಯಕೀಯ ಕ್ಷೇತ್ರದ ಸಾಮಾನ್ಯ ನಿಯಮಗಳ ಅರಿವು ಮೂಡಿಸುವುದು ಅತ್ಯವಶ್ಯಕ ಎಂದು ಅಂತಾರಾಷ್ಟ್ರೀಯ ವೈದ್ಯ ವಿಜ್ಞಾನಿ ಡಾ. ಮಯ್ಯಾ ಹೇಳಿದರು. ಈಚೆಗೆ ಅವರು ಮುಳಗುಂದ ನಾಕಾ ಬಳಿಯ ನವೀಕರಿಸಿದ ಡಾ. ಎನ್.ಬಿ.ಪಾಟೀಲ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ ಬಿಜಾಪುರದ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಶ್ರೀಗಳು ಹಾಗೂ ಡಾ. ಪವನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಗೀತಾ ಪಾಟೀಲ, ಡಾ. ಎ.ಬಿ.ಮಾಲೀಪಾಟೀಲ, ವಾಸಣ್ಣ ಕುರಡಗಿ, ಡಾ. ಆರ್.ಎನ್. ಗೋಡಬೋಲೆ, ಡಾ. ರೇಷ್ಮೆ, ಶ್ರೀನಿವಾಸ ಹುಯಿಲಗೋಳ, ಅಶೋಕ ನಿಲೂಗಲ್, ಬಾಲಚಂದ್ರ ಭರಮಗೌಡರ, ಆರ್.ಕೆ.ಹಬೀಬ, ಸಿ.ಕೆ.ಪಾಟೀಲ, ಡಾ. ಪ್ರಶಾಂತ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಡಾ. ಎನ್.ಬಿ.ಪಾಟೀಲ ಸ್ವಾಗತಿಸಿದರು. ಪ್ರೊ. ದತ್ತಪ್ರಸನ್ನ ಪಾಟೀಲ ಹಾಗೂ ಚಂದ್ರು ಬಾಳೆಹಳ್ಳಿಮಠ ನಿರೂಪಿಸಿದರು. ಡಾ. ಅನುಪಮಾ ಪಾಟೀಲ ವಂದಿಸಿದರು.