ಹಿಂಗಾರಿ ಬೆಳೆ ಕಟಾವಿಗೆ ಮಳೆ ಅಡ್ಡಿ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ, ಗದಗ, ಮಾ. 17
ಶನಿವಾರ ರಾತ್ರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ರೈತರು ಬೆಳೆಗಳನ್ನು ಕಟಾವು (ರಾಶಿ) ಮಾಡುತ್ತಿರುವ ಸಂದರ್ಭದಲ್ಲಿ ಬಂದೊದಗಿರುವ ಈ ಬೇಸಿಗೆ ಮಳೆಯಿಂದಾಗಿ ರೈತರು ಸಂಕಷ್ಟವನ್ನು ಅನುಭವಿಸುವಂತಾಗಿದೆ.
ಕಡಲೆ, ಗೋದಿ, ಬಿಳಿಜೋಳದ ರಾಶಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಜಿಲ್ಲೆಯಾದ್ಯಂತ ಮಳೆ ಬೇಗನೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಬೆಳೆಯು ಹಾಳಾಗುವ ಆತಂಕ ಹೆಚ್ಚಾಗಿದೆ.
ಹಗಲಿನಲ್ಲಿ ಬಿಸಿಲಿನ ಆರ್ಭಟ: ಹಗಲಿನ ವೇಳೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುತ್ತದೆ. ಹೀಗಾಗಿ ರಾತ್ರಿಯೂದ್ದಕ್ಕೂ ರೈತರು ತಮ್ಮ ಹೊಲಗಳಲ್ಲಿ ಜೋಳ, ಗೋದಿ ಕೀಳುತ್ತಾರೆ. ಆದರೆ, ರಾತ್ರಿ ಮಳೆ ಕಾಣಿಸಿಕೊಳ್ಳುತ್ತಿರುವುದು ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಳೆ ಅಡ್ಡಿ: ಈಗಾಗಲೇ ರೈತರು ತಾವು ಬೆಳೆದ ಬೆಳೆಯನ್ನು ಕಣದಲ್ಲಿ ಸಂಗ್ರಹಿಸಿದ್ದಾರೆ. ಆದರೆ, ಈಗ ರಾತ್ರಿ ಬಿರುಗಾಳಿ ಸಮೇತ ಮಳೆ ಬರುವ ವಾತಾವರಣ ಇರುತ್ತದೆ. ಈಗಾಗಲೇ ವಾರದಲ್ಲಿ 2 ಬಾರಿ ಆಗಿರುವ ಮಳೆಯಿಂದಾಗಿ ರೈತರು ಕಟಾವು ಮಾಡಲು ತಂದಿದ್ದ ಫಸಲು ಕೈತಪ್ಪುತ್ತಿದೆ. ಇನ್ನು ಕೆಲವರು ಕಟಾವು ಹಂತವನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಕಟಾವಿನ ನಂತರ ಉಳಿದ ಮೇವನ್ನು ಸಂಗ್ರಹಿಸಿಕೊಳ್ಳದೇ ಕಣದಲ್ಲಿ ಹಾಗೆಯೇ ಬಿಟ್ಟಿದ್ದು, ಶನಿವಾರ ಸುರಿದ ಮಳೆಯಿಂದಾಗಿ ಕಣದಲ್ಲಿರುವ ಮೇವು ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ರೈತರ ಎತ್ತುಗಳಿಗೆ ಮೇವಿನ ತೊಂದರೆಯಾಗುವ ಆತಂಕದಲ್ಲಿದ್ದಾರೆ. ಕಟಾವು ಪೂರ್ಣಗೊಂಡ ನಂತರ ಬರುವ ಮೇವನ್ನು ರೈತರು ಸಂಗ್ರಹಿಸಿಕೊಳ್ಳುವುದು ವಾಡಿಕೆ. ಆದರೆ, ಈ ಮೇವು ಮಳೆಯಿಂದಾಗಿ ಸಂಪೂರ್ಣವಾಗಿ ಒದ್ದೆಯಾಗಿ ಹಾಳಾಗುತ್ತಿದೆ.
ಹೇಗಾದರೂ ನೋವು ಮಾತ್ರ ರೈತನಿಗೆ
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ನರಗುಂದ, ಮುಂಡರಗಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇನ್ನು ರೋಣದಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಮಳೆಯೇನೋ ಆಗುವುದು ಒಳ್ಳೆಯದು. ಆದರೆ, ರೈತರು ಬೆಳೆದ ಬೆಳೆಯು ಕಟಾವಿನ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಮಳೆ ಬಂದರೆ ರೈತರಿಗೆ ದೊಡ್ಡ ನಷ್ಟವಾಗಲಿದೆ. ಏನೇ ಆಗಲಿ ಮಳೆ ಬಂದರೂ, ಬಾರದೇ ಇದ್ದರೂ ಸಂಕಷ್ಟವನ್ನು ಅನುಭವಿಸುವವನು ರೈತನೇ ಅನ್ನುವುದು ಮಾತ್ರ ನೋವಿನ ಸಂಗತಿ.
ಕಳೆದ ಒಂದು ವಾರದಿಂದ ಮಳೆರಾಯ ಆಟ ಆಡಕತ್ಯಾನ್ರಿ. ಈಗ 4 ದಿನದ ಹಿಂದ ಸ್ವಲ್ಪ ಮಳಿ ಆಗೈತ್ರಿ. ಆಗ ಅಷ್ಟೊಂದ ನಷ್ಟಾ ಏನ ಆಗಿಲ್ರಿ, ಆದ್ರ ಶನಿವಾರ ರಾತ್ರಿ ಬಂದ ಮಳಿಯಿಂದಾಗಿ ನಮ್ಮ ಗೋದಿ, ಜೋಳ ಎಲ್ಲಾ ಹಾಳಾಗಿ ಹೋಗಾಕತ್ಯಾವರ್ರೀ. ಹೀಂಗ ಮಳೆಯಾದ್ರ ರೈತನ ಹೊಟ್ಟಿಗೆ ಬರೆ ಹಾಕ್ಕೊಣಂಗಾಗೈತ್ರಿ.
- ಬಸವರಾಜ ಮೆಣಸಿನಕಾಯಿ, ಸಂತೋಷ ಮಾಡಳ್ಳಿ
ಲಕ್ಷ್ಮೇಶ್ವರದ ರೈತರು
ಏನ್ರೀ ಮಾಡೋದ ? ಇಷ್ಟದಿನ ಮಳಿ ಇಲ್ಲ, ಮಳಿ ಇಲ್ಲ ಅಂತಿದ್ವಿ, ಸ್ವಲ್ಪ ಮಳಿ ಆಗಿ ಬಿತ್ತಿದ್ ಬೆಳಿ ಈಗ ಕೈಗೆ ಬರೋ ಟೈಮ್‌ನ್ಯಾಗ ಮಳಿರಾಯ ಬಂದ ನಮ್ಮ ಬೆಳಿನ ಹಾಳ ಮಾಡಾಕತ್ತಾನ. ಹತ್ತಿ ಬಿಡಿಸುವಾಗ ಈ ರೀತಿ ಮಳಿ ಬಂದಿದ್ದು. ಹತ್ತಿ ಎಲ್ಲಾ ಮಣ್ಣಪಾಲಾಗೈತಿ.
- ನೀಲಪ್ಪ ತೊಂಡಿಹಾಳ, ನರೇಗಲ್ಲನ ರೈತ