ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ: ಚೆಟ್ಟಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಜ. ತೋಂಟದಾರ್ಯ ಮಠದ ಜಾತ್ರೆಗೆ ಭರದ ಸಿದ್ಧತೆ ನಡೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಹಾಗೂ ಭಕ್ತರ ಸಹಕಾರದೊಂದಿಗೆ ಅದ್ಧೂರಿ, ಅರ್ಥಪೂರ್ಣತೆಯ ಜತೆಗೆ ವಿಧಾಯಕ ರೀತಿಯಲ್ಲಿ ಆಚರಿಸಲಾಗುವುದೆಂದು ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿವಿಧ ಉಪ ಸಮಿತಿಗಳನ್ನು ರಚಿಸಲಾಗುತ್ತಿದೆ. ಮುಖ್ಯ ಸಮಿತಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಸಕಲ ಸದ್ಭಕ್ತರೊಡಗೂಡಿ ಜಾತ್ರಾ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಚರ್ಚಿಸಿ, ಸಿದ್ಧತೆ ಕಾರ್ಯ ನಡೆಸಲಾಗುತ್ತಿದೆ. ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲೆ ಹಾಗೂ ವೈಚಾರಿಕ ಚಿಂತನೆ ಹಾಗೂ ವಿವಿಧ ರಂಗದ ಗಣ್ಯ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಜಾತ್ರಾ ಮಹೋತ್ಸವದ ಅಂಗವಾಗಿ ಮುಖ್ಯವಾಗಿ ರಥ ಬೀದಿಯನ್ನು ಸಮತಟ್ಟಾಗಿಸುವ ಜತೆಗೆ ನಗರಸಭೆಯ ವತಿಯಿಂದ ಜ. ತೋಂಟದಾರ್ಯ ಮಠದ ಮುಂಭಾಗದ ಬೀದಿ ಪ್ರದೇಶವನ್ನು ದುರಸ್ತಿಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಉಪಾಧ್ಯಕ್ಷ ಶಿವಪುತ್ರಪ್ಪ ಕುಂದಗೋಳ, ವಿದ್ಯಾಧರ ದೊಡ್ಡಮನಿ, ಗಂಗಾಧರ ಹಿರೇಮಠ, ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಕಿಶನ್ ಮೇರವಾಡೆ, ಕೋಶಾಧ್ಯಕ್ಷ ಬಸವರಾಜ ರಾಮನಕೊಪ್ಪ, ಚಂದ್ರು ತಡಸದ, ಸಹ ಕಾರ್ಯದರ್ಶಿ ಎಸ್.ಎಸ್. ಕೊಟ್ಟೂರಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.