ದೇವರ ಮೊರೆ ಹೋದ ಪಾಟೀಲರ ಅಭಿಮಾನಿಗಳು
ಕನ್ನಡಪ್ರಭ ವಾರ್ತೆ, ನರಗುಂದ, ಮಾ.18
ಗುಂಡೇಟಿನಿಂದ ಗಾಯಗೊಂಡಿರುವ ಶಾಸಕ ಸಿ.ಸಿ. ಪಾಟೀಲರು ಶೀಘ್ರ ಗುಣಮುಖರಾಗಲೆಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಸೋಮವಾರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಮೊರೆ ಇಟ್ಟರು.
ನರಗುಂದ ಪಟ್ಟಣದ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರ ಅಭಿಮಾನಗಳು ದಂಡಾಪುರದ ಶ್ರೀ ಉಡಚಮ್ಮ ದೇವಿಗೆ ಹಾಲಿನ ಅಭಿಷೇಕ ಮತ್ತು 101 ಕಾಯಿ ಒಡೆಯುವ ಮೂಲಕ, ಸುಕ್ಷೇತ್ರ ವಿರಕ್ತಮಠದ ಚನ್ನಬಸವ ಶ್ರೀಗಳ ಗದ್ದುಗೆಗೆ ಪೂಜೆ ಮತ್ತು ಉರುಳು ಸೇವೆ ನಡೆಸಿದರು. ಹೊರಕೇರಿ ಓಣಿಯ ಶ್ರೀ ಅಂಬಾಭವಾನಿ ದೇವಿಗೆ ಹಾಲಿನ ಅಭಿಷೇಕ ಮತ್ತು 101 ಕಾಯಿ ಒಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಕರವೇ ಅಧ್ಯಕ್ಷ ಚನ್ನು ನಂದಿ, ರಾಘವೇಂದ್ರ ಆನೆಗುಂದಿ, ಭಗವಾನ ಉಪ್ಪಾರ, ಸುರೇಶ ಛೋಪ್ರ, ಮಹೇಶ ಹಟ್ಟಿ, ಹಸನಸಾಬ ಮಟೇಗರ, ಮುತ್ತು ಜ್ಞಾನೋಪಂತ, ವಿ.ಎಸ್. ಡಾಣೆ, ಸಂಭೋಜಿ ಕಾಶೀದ, ಉಮೇಶ ಯಮೋಜಿ, ಎಸ್.ಎನ್. ನವಲೆ, ಮುತ್ತು ಭೋಸ್ಲೆ, ಚಂದ್ರು ಪವಾರ, ಉಮೇಶ ಕುಡನವರ, ಬಸವಂತ ಕಾಟದಾರ, ವೀರಬಸಪ್ಪ ಹೂಗಾರ, ಸುರೇಶ ಹೂಗಾರ, ಈರಪ್ಪ ಬಿದರಗಿಡದ ಹಾಜರಿದ್ದರು.
ಮುಸ್ಲಿಮರಿಂದ ಪ್ರಾರ್ಥನೆ: ಕೇವಲ ಹಿಂದುಗಳು ಮಾತ್ರವಲ್ಲ, ಮುಸ್ಲಿಂ ಸಮುದಾಯದ ಹಲವಾರು ಮುಖಂಡರು ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪಾಟೀಲರ ಆರೋಗ್ಯ ಸುಧಾರಣೆಗಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವಾರು ಮುಸ್ಲಿಂ ಸಮುದಾಯದ ಮುಖಂಡರು, ಹಿರಿಯರು ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು.
ತಪ್ಪು ಮಾಡಿದ್ರಾ ಶಾಸಕರು: ಮೆಣಸಗಿ ಕಾರ್ಯಕ್ರಮಕ್ಕೆ ತೆರಳುವ ಪೂರ್ವದಲ್ಲಿಯೇ ಗ್ರಾಮದಲ್ಲಿನ ಪಾಟೀಲರ ಬೆಂಬಲಿಗರು, ನೀವು ಕಾರ್ಯಕ್ರಮಕ್ಕೆ ಬರುವುದು ಬೇಡ, ಗ್ರಾಮದಲ್ಲಿ ಪರಿಸ್ಥಿತಿ ಸರಿಯಾಗಿಲ್ಲ ಎಂದು ತಿಳಿಸಿದ್ದರೆನ್ನಲಾಗಿದೆ. ಯಾವುದೇ ಪೊಲೀಸರಿಲ್ಲದೆ ಕಾರ್ಯಕ್ರಮಕ್ಕೆ ಹೋಗಬಾರದಾಗಿತ್ತು. ಅದರಿಂದಾಗಿಯೇ ಈ ರೀತಿ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ನೀರವ ಮೌನ: ಈ ಘಟನೆಯಿಂದ ಪಟ್ಟಣದ ಶಿವಾಜಿ ಸರ್ಕಲ್ನಲ್ಲಿರುವ ಪಿ.ಎಚ್. ಪಾನಕಟ್ಟಿವರಿಗೆ ಸೇರಿದ ಪಂಕ್ಚರ್ ಅಂಗಡಿಗೆ ಸೋಮವಾರ ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ 60 ಸಾವಿರದ ಮೌಲ್ಯದ ಟ್ಯೂಬ್- ಟೈರ್ ಬೆಂಕಿಗೆ ಆಹುತಿಯಾಗಿದ್ದು. ಸ್ವಲ್ಪ ಮಟ್ಟಿನ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.