ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಫೈಬರ್ ಹಲಗೆ ಮಾರಾಟ ಜೋರು

Mainashree
Updated On : 19 Mar 2013, 10:50 am

 ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 18

ಹೋಳಿ ಹಬ್ಬ ಎಂದ ತಕ್ಷಣ ನೆನಪಾಗುವುದೇ ಹಲಗೆಯ ಡಂಕಣಕ ಡಂಕಣಕ ಎಂಬ ಸದ್ದು. ಈ ಸದ್ದು ಕೇಳಿದ ತಕ್ಷಣ ರೋಮಾಂಚನ. ಬಣ್ಣದ ಹಬ್ಬಕ್ಕೆ ಹಲಗೆ ಬೇಕೇ ಬೇಕು. ಇಲ್ಲದಿದ್ದರೆ ಬಣ್ಣದಾಟ ಆಡುವವರಿಗೆ ಏನೋ ಕಳೆದುಕೊಂಡ ಅನುಭವ.
ರಂಗು ರಂಗಿನ ಹೋಳಿ ಹಬ್ಬ ಸಮೀಪಿಸುತ್ತಿದ್ದು, ಪಟ್ಟಣದಲ್ಲಿ ಫೈಬರ್, ಚರ್ಮದ ಆಕರ್ಷಕ ಹಲಗೆಗಳು ಲಗ್ಗೆ ಇಟ್ಟಿದ್ದು, ಮಾರಾಟವೂ ಜೋರಾಗಿಯೆ ನಡೆಯುತ್ತಿದೆ.
ಹೋಳಿ ಹಬ್ಬ ಬರುತ್ತಿದ್ದಂತೆ ಮಕ್ಕಳಿಗೆ, ಯುವಕರಿಗೆ ಎಲ್ಲಿಲ್ಲದ ಸಂಭ್ರಮ, ಗಲ್ಲಿಗಲ್ಲಿಗಳಲ್ಲಿ ಎಲ್ಲ ಗೆಳೆಯರು ಕೂಡಿ ಕುಣಿಯುತ್ತ ಹಲಗೆ ಬಾರಿಸುತ್ತ ಸಂತಸಪಡುವ ಆ ಮಜವೇ ಬೇರೆ. ಹೋಳಿ ಹಬ್ಬಕ್ಕೆ ರಂಗು ತುಂಬುವ ಹಲಗೆ ತಯಾರಕರದ್ದು ಮಾತ್ರ ದಯನೀಯ ಸ್ಥಿತಿ. ಹಲಗೆ ಸದ್ದಿನ ಗುಂಗಿನಲ್ಲಿ ಅವರನ್ನು ನೆನಪಿಸಿಕೊಳ್ಳುವವರೇ ಇಲ್ಲ. ಪೈಬರ್ ಹಲಗೆಗಳ ಭರಾಟೆಯಲ್ಲಿ ಚರ್ಮದಿಂದ ಹಲಗೆ ತಯಾರಿಸುವ ಕುಟುಂಬಗಳು ಅವಸಾನದತ್ತ ಸಾಗುತ್ತಿವೆ. ಮುಂದೊಂದು ದಿನ ಚರ್ಮದಿಂದ ತಯಾರಿಸಿದ ಹಲಗೆಯನ್ನು ವಸ್ತು ಸಂಗ್ರಹಾಲಯದಲ್ಲಿ ಮಾತ್ರ ನೋಡುವ ಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ.
ಫೈಬರ್ ಹಲಗೆ ಮಾರಾಟ: ಚರ್ಮದಿಂದ ಹಲಗೆ ತಯಾರಿಸಿ ಮಾರಾಟ ಮಾಡುವ ಕುಟುಂಬಗಳು ಕಳೆದ 2-3 ವರ್ಷಗಳಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಫೈಬರ್ ಹಲಗೆಗಳ ದಾಳಿಗೆ ಸಿಲುಕಿ ಕಂಗಾಲಾಗಿವೆ. ನೋಡಲು ಸುಂದರವಾಗಿ ಕಾಣುವ ಫೈಬರ್ ಹಲಗೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದರಿಂದ ಚರ್ಮದ ವ್ಯಾಪಾರಕ್ಕೂ ಕೊಡಲಿ ಪೆಟ್ಟು ಬೀಳುವಂತಾಗಿದೆ. ಚಿಣ್ಣರನ್ನು ಸೆಳೆಯುತ್ತಿರುವ ಪೈಬರ್ ಹಲಗೆಗಳು ಅವರ ಅಚ್ಚುಮೆಚ್ಚಿನ ಆಟಿಕೆಗಳಲ್ಲಿ ಒಂದಾಗಿಬಿಟ್ಟಿವೆ. ಪೈಬರ್ ಹಲಗೆಗಳಿಗೆ ಚರ್ಮದ ಹಲಗೆಗಳಿಗಿಂತ ಜಾಸ್ತಿ ಬೆಲೆ. ಆದರೂ ಜನ ಫೈಬರ್ ಹಲಗೆಗಳಿಗೆ ಮಾರುಹೋಗುತ್ತಿದ್ದಾರೆ.
ಮೂಲ ಕಸಬು: ಈ ಹಿಂದೆ ಹೋಳಿ ಹಬ್ಬಕ್ಕೆ ತಿಂಗಳಿರುವಾಗಲೇ ಮನೆಗೆ ಬಂದು ಮುಂಗಡ ಹಣ ನೀಡಿ ಚರ್ಮದ ಹಲಗೆ ತಯಾರಿಸಿ ಕೊಡುವಂತೆ ಹೇಳಿ ಹೋಗುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಪೈಬರ್ ಹಲಗೆ ಭರಾಟೆಯಿಂದ ನಮ್ಮ ಮಾರಾಟ ಸಂಪೂರ್ಣ ಕುಸಿದಿದೆ. ಆದರೂ ವಂಶ ಪಾರಂಪರ್ಯವಾಗಿ ಬಂದ ಮೂಲ ಕಸುಬು ಬಿಡಲು ಮನಸ್ಸಿಲ್ಲದೇ ಹೇಗೋ ಹೊಟ್ಟೆಪಾಡು ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಹಲಗೆ ಮಾರಾಟಗಾರ ಮಂಜುನಾಥ ಬಗರಿಕಾರ ಹೇಳುತ್ತಾರೆ.
ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣದ ಅಂಬೇಡ್ಕರ್ ನಗರದ ಕೆಲವು ಕುಟುಂಬದವರು ಇಂದಿಗೂ ಚರ್ಮದಿಂದ ಹಲಗೆಗಳನ್ನು ತಯಾರಿಸುವ ಕಾಯಕದಿಂದಲೇ ತಮ್ಮ ಹೊಟ್ಟೆ ತುಂಬಿಕೊಳ್ಳುತ್ತಿದ್ದಾರೆ. ಹೋಳಿ ಹಬ್ಬಕ್ಕಿಂತ ಒಂದು ತಿಂಗಳ ಮುಂಚಿತವಾಗಿ ನಡೆಯುವ ಇವರ ಕಾಯಕ ಹಬ್ಬದ ನಂತರ ಸ್ಥಗಿತಗೊಳ್ಳುತ್ತದೆ. ನಂತರ ಜೀವನ ನಿರ್ವಹಣೆಗಾಗಿ ಪಟ್ಟಣ ಪಂಚಾಯಿತಿಯಲ್ಲಿ ಡಿ ವರ್ಗದ ನೌಕರರಾಗಿ ಕಸ ವಿಲೇವಾರಿ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಈ ಕುಟುಂಬದವರು ತಿಳಿಸುತ್ತಾರೆ.
ಲಾಭ-ನಷ್ಟ ಏನೇ ಆದರೂ ಈ ಮೂಲ ಕಸುಬನ್ನು ಎಂದೂ ಬಿಡುವುದಿಲ್ಲ ಎನ್ನುತ್ತಾರೆ ಹಲಗೆ ತಯಾರಕ ಶಿವಾನಂದ ಬಗಿರಕಾರ. ಆಧುನಿಕತೆಯ ಇಂದಿನ ದಿನಗಳಲ್ಲಿ ಭಾರತೀಯ ಮೂಲ ಪರಂಪರೆಯ ಸಂಸ್ಕೃತಿ ಉಳಿಸಿಕೊಂಡು ಹೋಗುತ್ತಿರುವ ಈ ಕುಟುಂಬಗಳ ನೆರವಿಗೆ ಸರ್ಕಾರದ ನೆರವಿನ ಹಸ್ತದ ಅವಶ್ಯಕತೆ ಇದೆ. ಇದರ ಜತೆಗೆ ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಬೆಂಬಲವೂ ಬೇಕಿದೆ. ಹಬ್ಬಕ್ಕೆ ಒಂದು ವಾರ ಮುಂಚಿತವಾಗಿಯೇ ಪಟ್ಟಣದ ಮಾರುಕಟ್ಟೆಯಲ್ಲಿ ಹಲಗೆ ಮಾರಾಟ ಭರ್ಜರಿಯಾಗಿ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement