ಯುವಕರಿಂದ ಮಾತ್ರ ಜಾತ್ಯತೀತ ರಾಷ್ಟ್ರ ನಿರ್ಮಾಣ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 18
ಬಲಿಷ್ಠ ಮತ್ತು ಜಾತ್ಯತೀತ ರಾಷ್ಟ್ರ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ. ಆದ್ದರಿಂದ ನೆಹರು ಯುವ ಕೇಂದ್ರ ಗ್ರಾಮೀಣ ಮಟ್ಟಕ್ಕೆ ಹೋಗಿ ಅಲ್ಲಿಯ ಯುವಕರಲ್ಲಿ ಜಾತ್ಯತೀತ ಮನೋಭಾವನೆಯನ್ನು ತುಂಬುವ ಕೆಲಸ ಮಾಡುತ್ತದೆ ಎಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮಹಾನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.
ಅವರು ಶನಿವಾರ ಸ್ಥಳೀಯ ಪುರಸಭೆಯ ಗಾಂಧಿಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಹಮ್ಮಿಕೊಂಡಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. ನೆಹರು ಯುವ ಕೇಂದ್ರಕ್ಕೆ 40 ವರ್ಷಗಳ ಸುದೀರ್ಘ ಇತಿಹಾಸವಿದೆ. ಗ್ರಾಮೀಣ ಯುವಕರಿಗೂ ನಾಯಕತ್ವ ಸಿಗಬೇಕು ಮತ್ತು ಅವರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೇಂದ್ರ ಕೆಲಸ ಮಾಡುತ್ತ ಬಂದಿದೆ. ಹಳ್ಳಿ ಮಟ್ಟದಲ್ಲಿ ಯುವಕ ಮತ್ತು ಯುವತಿಯರ ಮಂಡಳಗಳನ್ನು ಪ್ರಾರಂಭಿಸಿ, ಅವುಗಳ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣದ ಕೆಲಸಮಾಡುತ್ತ ಬಂದಿದೆ. ಪ್ರಪಂಚದಲ್ಲಿ 1 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿದ ನೆಹರು ಯುವ ಕೇಂದ್ರವನ್ನು 1987ರಲ್ಲಿ ದಿ. ರಾಜೀವಗಾಂಧಿ ಅವರು ಸಾಕಷ್ಟು ಶಕ್ತಿಯನ್ನು ತುಂಬಿ ಬೆಳೆಸಿದರು. ಒಟ್ಟು 623 ಜಿಲ್ಲೆಯಲ್ಲಿ 28 ಝೋನ್ಗಳಲ್ಲಿ ಈ ಸಂಘಟನೆ ಕೆಲಸ ಮಾಡುತ್ತಿದೆ. ಸಂಘಟನೆಯ ವತಿಯಿಂದ ಈ ವರ್ಷ ಕೇಂದ್ರದ ಬೆಳ್ಳಿ ಮಹೋತ್ಸವದ ಆಚರಣೆಯ ನಿಮಿತ್ತ 1 ಲಕ್ಷ ಯುವಕರಿಗೆ ತರಬೇತಿಯನ್ನು ಹಮ್ಮಿಕೊಂಡು ಅವರಿಗೆ ಬೇರೆ-ಬೇರೆ ಹಂತದಲ್ಲಿ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾಂಗ್ರೆಸ್ ಬ್ಲಾಕ್ ಕಮಿಟಿಯ ಅಧ್ಯಕ್ಷ ಹೇಮಂತಗೌಡ ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಡಿ.ಸಿ.ಪಾಟೀಲ, ಭೀಮಸಿಂಗ್ ರಾಠೋಡ, ಟಿ.ಬಿ.ಮೇಟಿ, ಹುಮಾಯುನ್ ಮಾಗಡಿ, ಆನಂದಗೌಡ ಪಾಟೀಲ, ಲಿಂಗರಾಜಗೌಡ ಪಾಟೀಲ, ಎಸ್.ಡಿ.ಮಕಾಂದಾರ, ಅಶೋಕ ಹುಬ್ಬಳ್ಳಿ, ಬಸವರಾಜ ರಾಮೇನಹಳ್ಳಿ, ರಾಘವೇಂದ್ರ ಕುರಿಯವರ ಮುಂತಾದವರು ಉಪಸ್ಥಿತರಿದ್ದರು. ರಾಮು ಕಲಾಲ ಸ್ವಾಗತಿಸಿದರು. ಶೇಖರ ಜುಟ್ಲಣ್ಣವರ ನಿರೂಪಿಸಿ, ವಂದಿಸಿದರು.