ಸುದ್ದಿ ಸಂಕ್ಷೇಪ
ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ
ಗದಗ: 2012-13ನೇ ಸಾಲಿನ ಶೈಕ್ಷಣಿಕ ವರ್ಷದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ 2 ತಿಂಗಳ (ಆಗಸ್ಟ್, ಸೆಪ್ಟೆಂಬರ್) ವೇತನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಅತಿಥಿ ಉಪನ್ಯಾಸಕರು ಆಯಾ ಕಾಲೇಜಿನ ಪ್ರಾಚಾರ್ಯರನ್ನು ಭೇಟಿಯಾಗಿ ವೇತನ ಪಡೆಯಬೇಕೆಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಪ್ರೊ ಹನುಮಂತಗೌಡ ಕಲ್ಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು 'ಮಹಿಳೆ ಎಷ್ಟು ಸುರಕ್ಷಿತ?' ಉಪನ್ಯಾಸ
ಗದಗ: ಡಾ ಪಿ.ಜಿ.ಎ.ಎಸ್. ಸಮಿತಿಯ ಪಂ. ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಅಂಗವಾಗಿ ಸ್ಥಳೀಯ ಹಾತಲಗೇರಿ ನಾಕಾ ಬಳಿಯ ಹಮಾಲರ ಕಾಲನಿಯಲ್ಲಿ ಮಾ. 19ರ ಸಂಜೆ 6 ಗಂಟೆಗೆ 'ಮಹಿಳೆ ಎಷ್ಟು ಸುರಕ್ಷಿತ?' ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಹಮಾಲರ ಕಾಲನಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಕುಸುಮಾ ಯರಗುಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪಿ.ವಿ. ಗೋಣೆಣ್ಣನವರ, ಪ್ರೊ ಎಂ.ಎನ್. ಹೊಂಬಾಳಿ, ಭುವನೇಶ್ವರಿ ಯಡವಟ್ಟಿ, ವೈ.ಜಿ. ಗಾರವಾಡ, ಎಸ್.ವೈ. ಹೊಸಮನಿ, ಎಸ್.ವಿ. ಕುಲಕರ್ಣಿ, ಎಸ್.ಎಂ. ಕರಕಲ್ಲು, ಎಂ.ಎಸ್. ಬನ್ನಿಮಟ್ಟಿ ಉಪಸ್ಥಿತರಿರುವರು. ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ಎಂದು ಪ್ರಕಟಣೆ ತಿಳಿಸಿದೆ.
ಬೇಂದ್ರೆ ಎಂದಿಗೂ ಜನಪ್ರಿಯ: ಗುರುಮಠ
ಗದಗ: ದ.ರಾ. ಬೇಂದ್ರೆಯವರ ಕಾವ್ಯ ನೈಜತೆಯ ಪ್ರತೀಕವಾಗಿದ್ದು, ಅವರು ಅಂದು, ಇಂದು ಎಂದೆಂದಿಗೂ ಜನಪ್ರಿಯ ಕವಿಯಾಗಿದ್ದಾರೆ ಎಂದು ಪ್ರಾಚಾರ್ಯ ವಿ.ಎಂ. ಗುರುಮಠ ಹೇಳಿದರು. ಈಚೆಗೆ ಅವರು ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದ.ರಾ. ಬೇಂದ್ರೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆಯವರ ಕಾವ್ಯದಲ್ಲಿ ಜನಪದ ಸೊಗಡು ಎದ್ದು ಕಾಣುತ್ತದೆ ಎಂದರು. ಪಂ. ರವೀಂದ್ರ ಜಕಾತಿ ಮಾತನಾಡಿ, ಬೇಂದ್ರೆಯವರ ಕಾವ್ಯ ಸಂಗೀತಕ್ಕೆ ಅಳವಡಿಸಿ ಹಾಡುವುದೇ ಒಂದು ಆನಂದ ಎಂದರು. ಡಾ ಸುಮಿತ್ರಾ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು.