ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಸ್ತಪ್ರತಿ ರಕ್ಷಣೆ ಅಗತ್ಯ: ಬಡಿಗೇರ

Mainashree
Updated On : 19 Mar 2013, 10:49 am

ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಹಸ್ತಪ್ರತಿಗಳ ಮೂಲಕ ಪೂರ್ವಜರು ನೀಡಿರುವ ಅಗಾಧವಾದ ಪರಂಪರೆ ಇಂದಿನ ಬದುಕಿಗೆ ದಾರಿದೀಪವಾಗಿರುವ ಹಿನ್ನೆಲೆಯಲ್ಲಿ ಹಸ್ತಪ್ರತಿಗಳನ್ನು ಸಂಶೋಧಿಸಿ, ಸಂರಕ್ಷಿಸುವ ಕಾರ್ಯವಾಗಬೇಕಿದೆ ಎಂದು ಹಂಪಿ ಕನ್ನಡ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಕರೆ ನೀಡಿದರು.
ಅವರು ಸೋಮವಾರ ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಂಪಿಯ ಕನ್ನಡ ವಿವಿ ಹಸ್ತಪ್ರತಿ ಸಂಪನ್ಮೂಲ ಹಾಗೂ ಸಂರಕ್ಷಣಾ ಕೇಂದ್ರ, ಭಾರತ ಸರ್ಕಾರದ ನ್ಯಾಷನಲ್ ಮಿಷನ್ ಫಾರ್ ಮ್ಯಾನುಸ್ಕ್ರಿಪ್ಟ್ಸ್ ಆಶ್ರಯದಲ್ಲಿ ರಾಷ್ಟ್ರೀಯ ಹಸ್ತಪ್ರತಿ ಜಾಗೃತಿ ಅಭಿಯಾನ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಹಸ್ತಪ್ರತಿಗಳು ಕೇವಲ ಕಲೆ, ವಾಸ್ತುಶಿಲ್ಪ, ಸಂಸ್ಕೃತಿಗಳನ್ನು ಮಾತ್ರವಲ್ಲದೆ, ಅನೇಕ ಪರಂಪರೆ ಹಾಗೂ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಡುತ್ತಿವೆ. ಹಸ್ತಪ್ರತಿಗಳನ್ನು ಹುಡುಕಿ ಸಂರಕ್ಷಿಸಿ, ಸಂಶೋಧನೆ ಮಾಡಿದಲ್ಲಿ ಇಡೀ ಇತಿಹಾಸವೇ ಬದಲಾಗುವ ಸಾಧ್ಯತೆಗಳಿವೆ. ಯಾವುದೇ ತಂತ್ರಜ್ಞಾನಗಳ ಬಳಕೆ ಇಲ್ಲದೆ, ಕ್ರಿ.ಶ. 1350ರಲ್ಲಿ ನಮ್ಮ ಪೂರ್ವಜರು ಕಲ್ಲಿನ ಭಾರ ಹಗುರ ಮಾಡುವ ಸಾಧನ ಕಂಡುಹಿಡಿದು ಅನೇಕ ಬೃಹತ್ ಆಕಾರದ ಕಲ್ಲಿನ ದೇವಾಲಯಗಳ ಸ್ಥಾಪಿಸಿದರು.
ಕ್ರಿ.ಶ. 950ರಲ್ಲೇ ಗರ್ಭದಲ್ಲಿ ಮಗುವಿನ ಲಿಂಗ ಕಂಡುಹಿಡಿಯುವುದು ಹಾಗೂ ಮಗುವಿನ ಆರೋಗ್ಯ ಸ್ಥಿತಿ ಕಂಡುಹಿಡಿಯುವ ಜ್ಞಾನ ಹೊಂದಿದ್ದರು. ಈ ಎಲ್ಲ ವಿಚಾರಗಳು ಹಸ್ತಪ್ರತಿ ದಾಖಲೆಗಳಿಂದ ತಿಳಿದುಬರುತ್ತದೆ. ನಮ್ಮ ಪೂರ್ವಜರ ಸಂಶೋಧನೆ, ಆಚರಣೆಗಳು, ಅವರ ಬದುಕನ್ನು ಬಿಂಬಿಸುವ ಎಲ್ಲ ಶಾಸ್ತ್ರಗಳು ಮಾನವ ವಿಕಾಸಕ್ಕೆ ದಾರಿಯಾಗಿದೆ ಎಂದು ಅವರು ಹೇಳಿದರು.
ಆದರೆ ಇಂದು ಜ್ಯೋತಿಷ್ಯಶಾಸ್ತ್ರ ಮತ್ತು ನಿಧಿಶಾಸ್ತ್ರ ಕೆಲವು ದುಷ್ಟರ ಕೈಗೆ ಸಿಕ್ಕು ವಿಕೃತಗೊಂಡಿದೆ. ಪೂರ್ವಜರು ಸಂಪತ್ತು ಕಾಪಾಡಿಕೊಳ್ಳಲು ವಿವಿಧ ಮಾರ್ಗ ಅನುಸರಿಸುತ್ತಿದ್ದರು. ಬಂಗಾರ, ಬೆಳ್ಳಿ, ಆಭರಣಗಳನ್ನು ಹಂಡೆ, ಕೊಡ ಅಥವಾ ಡಬ್ಬಗಳಲ್ಲಿ ತುಂಬಿ ನೆಲದಲ್ಲಿ ಹುಗಿಯುತ್ತಿದ್ದರು. ಆದರೆ ಈಗ ಆ ಸಂಪತ್ತು ದೋಚುವ ಪ್ರಯತ್ನ ನಡೆಯುತ್ತಿದೆ. ನರಬಲಿ, ಪ್ರಾಣಿಬಲಿ ನೀಡಿ, ನಿಧಿ ಶೋಧಿಸಲಾಗುತ್ತಿದೆ. ಸಮಾಜದಲ್ಲಿ ಇಂತಹ ವಿಕೃತಿಗಳು ಬೆಳೆದಿರುವುದು ದುರದೃಷ್ಟಕರ ಎಂದು ಡಾ. ಬಡಿಗೇರ ವಿಷಾದಿಸಿದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾ. ಬಿ.ಎಚ್. ಹಾದಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯೆ ಬೋರಮ್ಮ ಯಾದವಾಡ, ಪ್ರೊ. ಜೆ.ಎ. ಪಾಟೀಲ್, ಸಕ್ಕೂಬಾಯಿ ಮಲ್ಲಾಪುರ ಉಪಸ್ಥಿತರಿದ್ದರು. ಶ್ರೀದೇವಿ ಅಕ್ಕಸಾಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎಂ.ಬಿ. ಕೊಳವಿ ಸ್ವಾಗತಿಸಿದರು. ಎ.ಕೆ. ಮಠ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಎ.ವಿ. ದೇವಾಂಗಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement