ಅಭೂತಪೂರ್ವ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 19
ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಹಿಂದೆಂದೂ ಆಗಲಾರದಷ್ಟು ಅಭಿವೃದ್ಧಿ ಕಾರ್ಯಗಳು ಕಳೆದ 5 ವರ್ಷದ ಅವಧಿಯಲ್ಲಾಗಿವೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಸೋಮವಾರ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ರು. 2.27 ಕೋಟಿ ವೆಚ್ಚದಲ್ಲಿ ಬಿದರಹಳ್ಳಿ-ಕೇರಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಲಕ್ಷ್ಮೇಶ್ವರದಲ್ಲಿ ರೈತರು ಹೊಲಗಳಿಗೆ ಹೋಗಲು ಅನಕೂಲವಾಗಲು 8 ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕೆಲಸವನ್ನು ಹಿಂದಿನ ಯಾವ ಸರ್ಕಾರಗಳು ಮಾಡಿರಲಿಲ್ಲ. ರೈತನಾಗಿರುವ ನಾನು ರೈತರ ಕಷ್ಟ ಸುಖಗಳನ್ನು ಬಲ್ಲವನಾಗಿದ್ದರಿಂದ ಹೆಚ್ಚು ಮುತವರ್ಜಿವಹಿಸಿ ಈ ಕೆಲಸಗಳನ್ನು ಪೂರ್ಣಗೊಳಿಸಿದ್ದೇನೆ ಎಂದರು. ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ಮುಂಡರಗಿ ತಾಲೂಕಿನ 30 ಹಳ್ಳಿಗಳಲ್ಲಿಯೂ ಸಂಪೂರ್ಣ ರಸ್ತೆಗಳು ಅಭಿವೃದ್ಧಿಯಾಗಿದ್ದು, ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸತ್ಯಪ್ಪ ನೀಲಗಾರ, ನಾಗಪ್ಪ ವಾರದ, ಹನುಮಪ್ಪ, ಬಿ.ಆರ್.ಪಾಟೀಲ, ಚಂದ್ರು ಲಮಾಣಿ, ಆರ್.ಎಂ. ತಪ್ಪಡಿ, ಸುರೇಶ ಕ್ಯಾದಗಿಹಳ್ಳಿ, ಲಿಂಗಪ್ಪ ಬೂದಿಹಾಳ, ಸಿ.ಜಿ. ಬಡ್ನಿ, ಸತ್ಯಪ್ಪ ಕುರಗೋಡಿ, ಸತೀಶ ಮಹಾಪುರುಷ, ಗ್ರಾಪಂ ಸದಸ್ಯೆ ಅಂಗಡಿ, ಸಹಾಯಕ ಅಭಿಯಂತರ ಪ್ರಕಾಶಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಶ್ರೀಕಾಂತಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.