ಉಪಚುನಾವಣೆ ಆಶ್ವಾಸನೆ ಅನುಷ್ಠಾನ: ಕರಡಿ
ಕೊಪ್ಪಳ: ನಾನು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಸೇರುವ ವೇಳೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ. ಅದರಲ್ಲೂ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೆ ಆದೇಶ ಮಾಡಿರುವುದು ಬಂಪರ್ ಹೊಡೆದಂತಾಗಿದೆ. ಹೀಗಾಗಿ, ಬೈ ಎಲೆಕ್ಸ್ನ್ ಆಶ್ವಾಸನೆಯನ್ನು ಅನುಷ್ಠಾನ ಮಾಡಿದಂತಾಗಿದೆ ಎಂದು ಶಾಸಕ ಸಂಗಣ್ಣ ಕರಡಿ ಹೇಳಿದರು.
ಮಂಗಳವಾರ ನಗರದ ಹೊಸಪೇಟೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ 250 ಹಾಸಿಗೆ ಆಸ್ಪತ್ರೆಯ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಸೇರಿದ್ದರಿಂದ ಕೊಪ್ಪಳಕ್ಕೆ ಯಾವ್ಯಾವ ಕೊಡುಗೆಗಳು ಸಿಕ್ಕಿವೆ ಎನ್ನುವ ಕುರಿತು ಎಳೆ-ಎಳೆಯಾಗಿ ಬಿಚ್ಚಿಟ್ಟ ಅವರು, ಜಿಲ್ಲೆಗೆ ಅಭಿವೃದ್ಧಿ ಮಹಾಪೂರವನ್ನೇ ಹರಿಸಲಾಗಿದೆ. ಇವೆಲ್ಲವೂ ಅನುಷ್ಠಾನವಾಗುವ ವೇಳೆಗೆ ಕೊಪ್ಪಳಕ್ಕಿರುವ ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚಿ ಹೋಗಲಿದೆ ಎಂದರು.
ಕೊಪ್ಪಳಕ್ಕೆ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜ್ ನೀಡಲಾಗಿದೆ. ಇದಕ್ಕಾಗಿ ಅಗತ್ಯ ಹಣ ಮತ್ತು ಜಮೀನು ಖರೀದಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಇದರಿಂದಾಗಿ ನಮ್ಮ ಬಹುದೊಡ್ಡ ಬೇಡಿಕೆ ಈಡೇರಿಸಿದಂತಾಗಿದೆ. ಇದಕ್ಕಾಗಿ ನಾವು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಅಭಿನಂದಿಸಬೇಕು ಎಂದರು.
ಇನ್ನು ಕೊಪ್ಪಳ ನಗರಕ್ಕೆ ತೀರಾ ಅಗತ್ಯವಾಗಿದ್ದ ಎರಡು ರೇಲ್ವೆ ಗೇಟ್ ನಿರ್ಮಾಣಕ್ಕೆ ರಾಜ್ಯದ ಪಾಲಿನ ರು. 17 ಕೋಟಿ ಅನುದಾನವನ್ನೂ ಸಿಎಂ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬೇಕಾಗಿದ್ದ ರು. 17 ಕೋಟಿ ನೀಡಲಾಗಿದೆ. ರಾಜ್ಯದಲ್ಲಿ 116 ಎಕರೆ ಭೂಮಿ ಖರೀದಿಸಿ, ಅದಕ್ಕೆ ಮೂಲಭೂತ ಸೌಲಭ್ಯ ಒದಗಿಸಿ, ನಿವೇಶನ ನೀಡುವುದಷ್ಟೇ ಅಲ್ಲ, ಮನೆ ನಿರ್ಮಾಣಕ್ಕೆ ರು. 75 ಸಾವಿರ ಸಹಾಯಧನ ನೀಡುವ ಮಹತ್ವದ ಯೋಜನೆ ಜಾರಿ ಮಾಡಲಾಗಿದೆ.
ಕೊಪ್ಪಳ ನಗರವೊಂದರಲ್ಲಿ ಸುಮಾರು 4 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದೊಂದು ರೀತಿಯಲ್ಲಿ ಮೆಗಾಸಿಟಿಯಾಗಲಿದೆ. ಇದು ರಾಜ್ಯದಲ್ಲಿಯೇ ವಿಶೇಷವಾಗಿರುವ ಯೋಜನೆಯಾಗಿದೆ. ಕೊಪ್ಪಳ ಜಿಲ್ಲೆ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆ ನಿರ್ಮಾಣ ಕಾಮಗಾರಿ ಶುರುವಾಗಿದೆ. ನೀರಾವರಿ ಯೋಜನೆಗಳಿಗೆ ಸುಮಾರು ರು. 300 ಕೋಟಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಪಾರ ಕೈಗಾರಿಕೆಗಳು ಇರುವುದರಿಂದ ಅದಕ್ಕೆ ಪೂರಕವಾಗಿ ಕೈಗಾರಿಕಾ ವಸಹಾತು ಸ್ಥಾಪನೆಗೆ ಸರ್ಕಾರ ಮಂಜೂರಿ ನೀಡಿದೆ. ಇದಕ್ಕಾಗಿ ಈಗಾಗಲೇ ಭೂಮಿಯನ್ನು ಖರೀದಿ ಮಾಡಲಾಗಿದೆ. ಹೀಗೆ, ಹತ್ತು ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ನೀಡಿದೆ. ಅದರಲ್ಲೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಸತಿ ಸಚಿವ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ನಾವು ಅಭಿನಂದಿಸಲೇಬೇಕು ಎಂದ ಅವರು, ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಈ ಮೂಲಕ ಬಿಜೆಪಿಯಲ್ಲಿಯೇ ಮುಂದುವರಿಯುವ ಸುಳಿವು ನೀಡಿದರು.