ತಪ್ಪಿತಸ್ಥರನ್ನು ಬೇಗನೆ ಬಂಧಿಸಿ: ಜೋಗಣ್ಣವರ
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 19
ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಶಾಸಕರಿಗೆ ಗುಂಡೇಟು ತಗುಲಿದ ಘಟನೆಗೆ ಕಾರಣರಾದವರನ್ನು ಪೊಲೀಸರುಢಿ ಶೀಘ್ರವೇ ಬಂಧಿಸಬೇಕೆಂದು ಪುರಸಭೆ ಸದಸ್ಯ ವಾಸು ಜೋಗಣ್ಣವರ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಣಸಗಿ ಗ್ರಾಮದ ಕಾಂಕ್ರೀಟ್ ರಸ್ತೆ ಭೂಮಿಪೂಜೆಗೆ ಶಾಸಕ ಸಿ.ಸಿ. ಪಾಟೀಲರು ಹೋದಾಗ ಅದೇ ಗ್ರಾಮದ ಜಿಪಂ ಸದಸ್ಯೆ ಶಾರದಾ ಹಿರೇಗೌಡ್ರ ಮತ್ತು ಅವರ ಪತಿ, ಕುಟುಂಬದವರು ಈ ಘಟನೆಗೆ ಕಾರಣರಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಘಟನೆ ನಡೆದು 3 ದಿನ ಗತಿಸಿದರೂ ಯಾರನ್ನೂ ಬಂಧಿಸಿಲ್ಲ. ಕೇವಲ 2 ತಂಡ ರಚನೆ ಮಾಡಿ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಒಬ್ಬ ಜನಪ್ರತಿನಿಧಿಗೆ ಈ ಸ್ಥಿತಿಯಾದರೆ ಶ್ರೀಸಾಮಾನ್ಯರ ಗತಿಯೇನು ಎಂಬುದು ಜನತೆಗೆ ತಿಳಿಯದಾಗಿದೆ. ಮೆಣಸಗಿ ಗ್ರಾಮದ ಹಿರೇಗೌಡ್ರ ಕುಟುಂಬದವರು ಶಾಸಕರನ್ನು ಬೆದರಿಸಲು ಬಂದಾಗ ಶಾಸಕರ ಗನ್‌ಮ್ಯಾನ್ ಜನರನ್ನು ಚದುರಿಸಲು ಗನ್ ಲೋಡ್ ಮಾಡುವ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದಿತ್ತು. ಅಭಿವೃದ್ಧಿಪರ ಶಾಸಕರನ್ನು ಪಾನಮತ್ತರಾಗಿ ಬಂದ ಕೆಲವರು ಗ್ರಾಮಸ್ಥರ ಮುಂದೆ ಅವಾಚ್ಯವಾಗಿ ನಿಂದಿಸಿದ್ದರೂ ಈವರೆಗೂ ಅವರನ್ನು ಬಂಧಿಸಿಲ್ಲ. ಇದು ಖಂಡನೀಯ ಎಂದರು.
ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಪೊಲೀಸ್ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಶಾಸಕರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಜೋಗಣ್ಣವರ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಪುರಸಭೆ ಸದಸ್ಯ ಶಿವಾನಂದ ಮುತ್ತವಾಡ, ಚಂದ್ರಶೇಖರ ಕೋಟಿ, ಪ್ರಕಾಶ ಪಟ್ಟಣಶಟ್ಟಿ, ಉಮೇಶ ಕುಡನೆವರ, ಚಂದ್ರು ಪವಾರ, ಉಮೇಶ ಯಮೋಜಿ, ವಿರೂಪಾಕ್ಷಪ್ಪ ಅಪೋಜಿ, ರಾಜುಗೌಡ ಪಾಟೀಲ, ಮಹೇಶ ಹಟ್ಟಿ, ಬಸುರಾಜ ಪಾಟೀಲ, ಮಂಜು ಮೆಣಸಗಿ ಉಪಸ್ಥಿತರಿದ್ದರು.