ಮನಸೆಳೆಯುವ ಛಾಯಾಚಿತ್ರ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಗದಗ, ಮಾ. 19
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ವಾರ್ತಾ ಇಲಾಖೆಯು ಮಾ. 19 ರಿಂದ 20 ರವರೆಗೆ ವಿಧಾನಸಭೆ-60 ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನದಲ್ಲಿ 1942ರ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಿಂದ 2012ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಮಾಣ ವಚನ ಸ್ವೀಕಾರದವರೆಗಿನ ಅಪರೂಪದ ಛಾಯಾಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಸಾರ್ವಜನಿಕರು ವಿದ್ಯಾರ್ಥಿಗಳು ಆಗಮಿಸಿ ಉತ್ಸಾಹದಿಂದ ವೀಕ್ಷಿಸುತ್ತಿದ್ದಾರೆ.
ರಾಜ್ಯದ ಶಕ್ತಿ ಕೇಂದ್ರ ಎನಿಸಿರುವ ವಿಧಾನಸೌಧ, ವಾಸ್ತುಶಿಲ್ಪದ ದೃಷ್ಟಿಯಿಂದಲೂ ಐತಿಹಾಸಿಕ ಕಟ್ಟಡವಾಗಿದೆ. ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಪ್ರಧಾನಿ ನೆಹರು ಶಂಕುಸ್ಥಾಪನೆ ನೆರವೇರಿಸಿದ್ದರು.
1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಮ್ಮ ಮರು ನಾಮಕರಣ ಮಾಡಿದ ಸಂದರ್ಭದಲ್ಲಿ ರಾಜ್ಯದ ನಕ್ಷೆಯನ್ನು ವಿಧಾನಸೌಧದ ಮೆಟ್ಟಿಲಿನಲ್ಲಿ ಅನಾವರಣ ಮಾಡಿದ ಸಂದರ್ಭ, ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ವಿಧಾನಸಭೆ ಅಧಿವೇಶನವೂ ಸೇರಿದಂತೆ ಹಲವಾರು ಅಪರೂಪದ ಘಟನೆಗಳಿಗೆ ಈ ಛಾಯಾಚಿತ್ರಗಳು ಸಾಕ್ಷಿಯಾಗಿವೆ.
ಹಲವು ಕಡೆಗಳಲ್ಲಿ ಪ್ರದರ್ಶನ: ಈ ಹಿಂದೆ ವಿಧಾನಸಭೆಯ ವಜ್ರಮಹೋತ್ಸವ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮೊದಲ ಬಾರಿಗೆ ಈ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಯಿತು. ಬಳಿಕ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2ನೇ ಪ್ರದರ್ಶನ ನಡೆಸಲಾಯಿತು. ಈಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧದ ಉದ್ಘಾಟನೆ ಹಾಗೂ ಮೈಸೂರು ದಸರಾ ವೇಳೆಯೂ ಈ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈಗ ಗದಗನಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಮುಖರ ಭೇಟಿಯ ಚಿತ್ರಗಳು: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬೆಂಗಳೂರು ಭೇಟಿ, ಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನ, ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನ, ಚೀನಾ ಪ್ರಧಾನಿ ಚೌಎನ್ಲೈ, ವಿಯೆಟ್ನಾಂ ಅಧ್ಯಕ್ಷರು, ಸಾಫ್ಟವೇರ್ ಕ್ಷೇತ್ರದ ದಿಗ್ಗಜ ಬಿಲ್ಗೇಟ್ಸ್ರ ಭೇಟಿ ಮುಂತಾದ ಅಪರೂಪದ ಚಿತ್ರಗಳು. ಕೆಂಗಲ್ ಹನುಮಂತಯ್ಯ ಸೇರಿದಂತೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸ್ಪೀಕರ್ಗಳ ಭಾವಚಿತ್ರಗಳು, ಸುವರ್ಣ ಸೌಧದ ನಿರ್ಮಾಣದ ವಿವಿಧ ಹಂತಗಳಿಂದ ಹಿಡಿದು ಉದ್ಘಾಟನಾ ಕಾರ್ಯಕ್ರಮಗಳನ್ನೊಳಗೊಂಡ ಚಿತ್ರಗಳಿವೆ. ವೀಕ್ಷಣೆಗೆ ಜನ ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
60 ವರ್ಷಗಳ ಇತಿಹಾಸ ನೆನೆಪಿಸುವ ಉದ್ದೇಶದಿಂದ ಈ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಗರದಲ್ಲಿರುವ ಎಲ್ಲ ಶಾಲೆ, ಕಾಲೇಜುಗಳಿಗೆ ಈ ಪ್ರದರ್ಶನದ ಕುರಿತು ಸೂಚಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕಾಗಿದೆ.
-ಸಿ.ಪಿ. ಮಾಯಾಚಾರಿ, ಜಿಲ್ಲಾ ವಾರ್ತಾಧಿಕಾರಿ
ಮಂಗಳವಾರದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ವಿಧಾನಸಭೆ-60 ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನದ ಕಾರ್ಯ ಶ್ಲಾಘನೀಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಳೆದ 60 ವರ್ಷಗಳಿಂದ ರಾಜಕೀಯದಲ್ಲಾದ ಅಭಿವೃದ್ಧಿ ಹಾಗೂ ರಾಜ್ಯಕ್ಕೆ ಭೇಟಿ ನೀಡಿದ ಮಹನೀಯರ ಕುರಿತು ಸಮಗ್ರ ಮಾಹಿತಿ ನೀಡಿದಂತಾಗುತ್ತದೆ. ಇದೊಂದು ಉಪಯುಕ್ತವಾದ ಛಾಯಾಚಿತ್ರ ಪ್ರದರ್ಶನವಾಗಿದೆ.
-ಎಂ.ಎಸ್. ಪಾಟೀಲ , ಜಿಪಂ ಅಧ್ಯಕ್ಷ