ಈದ್ಗಾ ಕಮಿಟಿಗೆ ಚುನಾವಣೆಗೆ ಆಗ್ರಹ
ಗದಗ: ಬೆಟಗೇರಿಯ ಈದ್ಗಾ ಕಮಿಟಿ ಸಂಸ್ಥೆಯ ಚುನಾವಣೆಯನ್ನು ನಿಯಮಾವಳಿ ಪ್ರಕಾರ ನಡೆಸದೆ ಎಂ.ಆರ್. ಅಣ್ಣಿಗೇರಿ ಏಕಪಕ್ಷೀಯವಾಗಿ ಕಮಿಟಿಯ ನಿಯಮಾವಳಿ (ಬೈಲಾ) ತಿದ್ದುಪಡಿ ಮಾಡಿದ್ದು, ಕಾನೂನು ಬಾಹೀರವಾಗಿದ್ದು, ಇದನ್ನು ಪರಿಗಣಿಸಿ ಜಿಲ್ಲಾ ವಕ್ಫ್ ಬೋರ್ಡನವರು ಕೂಡಲೇ ನ್ಯಾಯಯುತವಾಗಿ ಚುನಾವಣೆ ನಡೆಸಿ, ಈದ್ಗಾ ಕಮಿಟಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಬೇಕೆಂದು ಕಮಿಟಿಯ ಆಜೀವ ಸದಸ್ಯ ಎಂ.ಎಚ್. ಶಿರಹಟ್ಟಿ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆ ನಡೆಸಬಾರದೆಂಬ ತಿದ್ದುಪಡಿಯು ಬೆಟಗೇರಿ ಈದ್ಗಾ ಕಮಿಟಿಯ 122 ಆಜೀವ ಸದಸ್ಯರ ಹಿತಾಸಕ್ತಿಗೆ ಹಾಗೂ ಈದ್ಗಾ ಕಮಿಟಿ ಅಭಿವೃದ್ಧಿಗೆ ಮಾರಕವಾಗಿದೆ. ವಕ್ಫ್ ಬೋರ್ಡ್ ನಿಯಮಾವಳಿ ಪ್ರಕಾರ 3 ವರ್ಷಕ್ಕೊಮ್ಮೆ ಚುನಾವಣೆ ನಡೆಸುವುದು ಅವಶ್ಯ. ಆದರೆ ಇದಕ್ಕೆ ವಿರುದ್ಧವಾಗಿ ಸಾಗಿರುವ ಅಣ್ಣಿಗೇರಿ ಅವರು ಈ ಹಿಂದೆ ಕೂಡ ಈದ್ಗಾ ಕಮಿಟಿ ವ್ಯಾಪ್ತಿಗೆ ಬರುವ 25 ಜಮಾತನಲ್ಲಿ ತಲಾ 2 ಸದಸ್ಯರ ಹೆಸರು ಪಡೆದುಕೊಂಡು ಚುನಾವಣೆ ನಡೆಸದೆ ಇರುವುದು ವಕ್ಫ್ ಬೋರ್ಡ್ ನಿಯಮಾವಳಿಗೆ ವಿರುದ್ಧವಾಗಿದೆ. ವಕ್ಫ್ ಬೋರ್ಡ್ನವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. 15 ದಿನದೊಳಗಾಗಿ ಈದ್ಗಾ ಕಮಿಟಿಗೆ ಚುನಾವಣೆ ಘೋಷಿಸಬೇಕು. ಇಲ್ಲವಾದರೆ ಜಿಲ್ಲಾ ವಕ್ಫ್ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಿ, ಹೋರಾಟ ನಡೆಸಲಾಗುವುದೆಂದು ಈದ್ಗಾ ಕಮಿಟಿಯ ಆಜೀವ ಸದಸ್ಯರಾದ ಇಬ್ರಾಹಿಂಸಾಬ್ ಶಿರಹಟ್ಟಿ, ಮಕ್ತುಂಸಾಬ ಯರಗಟ್ಟಿ, ಜಾನಿಸಾಬ ಹಣಗಿ, ಎನ್.ಎಂ. ಬೇಪಾರಿ, ಮತ್ತಿತರರು ತಿಳಿಸಿದ್ದಾರೆ.