ಭ್ರಷ್ಟಾಚಾರದಿಂದ ಅಪಖ್ಯಾತಿ
ಶಿರಹಟ್ಟಿ: ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರದಿಂದ ಕರ್ನಾಟಕ ಅಪಖ್ಯಾತಿಗೆ ಒಳಗಾಗಿದ್ದು, ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಸ್ಥರೇ ಲಜ್ಜೆಗೆಟ್ಟ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಅದರಲ್ಲಿ ನೇರ ಪಾಲುದಾರರಾಗಿರುವುದು ನಾಚಿಕೆ ತರುವ ಬೆಳವಣಿಗೆ ಎಂದು ಮಾಚಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಬುಧವಾರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಏರ್ಪಡಿಸಿದ್ದ ಶಿರಹಟ್ಟಿ ವಿಧಾನಸಭಾ ಮೀಸಲು ಮತಕ್ಷೇತ್ರದ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರು. 1 ಲಕ್ಷ ಕೋಟಿ ಅವ್ಯವಹಾರವನ್ನು ಬಿಜೆಪಿ ಸರ್ಕಾರದ ಮಂತ್ರಿಗಳು ಮಾಡಿದ್ದಾರೆ. 13 ಸಚಿವರು ಹಾಗೂ 51 ಶಾಸಕರು ವಿವಿಧ ಹಗರಣಗಳಲ್ಲಿ ಸಿಲುಕಿದ್ದಾರೆ. ಇಂತಹ ಕೆಟ್ಟ ವ್ಯವಸ್ಥೆಗೆ ರಾಜ್ಯದ ಜನತೆ ವಿದಾಯ ಹೇಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಮೂಢನಂಬಿಕೆಯ ಷಡ್ಯಂತ್ರದಿಂದ ಜನರ ಶೋಷಣೆಗೆ ಮುಂದಾದ, ಅಕ್ರಮ ಗಣಿಗಾರಿಕೆ ಮಾಡಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ದ ಬಿಜೆಪಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಬೇಕು ಎಂದರು. ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಟಿ. ಈಶ್ವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ಲಕ್ಷ್ಮಣಗೌಡ ಪಾಟೀಲ, ವೀರಣ್ಣ ಅಂಗಡಿ, ಹೇಮಂತಗೌಡ ಪಾಟೀಲ, ಯು.ಎನ್. ಹೊಳಲಾಪುರ, ಬಿ.ಸಿ. ಪಾಟೀಲ, ಚನ್ನಪ್ಪ ಜಗಲಿ, ಫಕೀರಗಡ ಪಾಟೀಲ, ಶಿವಪ್ರಕಾಶ ಮಹಾಜನಶೆಟ್ಟರ, ವಾಸಣ್ಣ ಕುರಡಗಿ, ಶೇಖರಗೌಡ ಪಾಟೀಲ, ರಾಮಣ್ಣ ಫಲದೊಡ್ಡಿ, ಎಸ್.ಆರ್. ಪಾಟೀಲ, ರಾಮಣ್ಣ ಲಮಾಣಿ, ಭೀಮಸಿಂಗ್ ರಾಠೋಡ ಉಪಸ್ಥಿತರಿದ್ದರು.