ಮರಳು ಸಾಗಣೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 20
ತಾಲೂಕಿನ ಕಕ್ಕೂರು ಬಳಿ ತುಂಗಭದ್ರಾ ನದಿಯಲ್ಲಿ ಟೆಂಡರ್ ಅವಧಿ ಮುಗಿದಿದ್ದರೂ ಉಸುಗು ಸಾಗಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಕಕ್ಕೂರು, ಕಕ್ಕೂರು ತಾಂಡಾ, ಬೆಣ್ಣಿಹಳ್ಳಿ ಗ್ರಾಮಸ್ಥರು ನದಿ ದಡದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ಬುಧವಾರ ಬೆಳಗ್ಗೆ ಜೆಸಿಬಿ ಮೂಲಕ ಉಸುಕು ತೆಗೆಯಲು ಟೆಂಡರ್‌ದಾರರು ಮುಂದಾದಾಗ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಮಾತಿಗೆ ಮನ್ನಣೆ ನೀಡದೆ ಟೆಂಡರ್‌ದಾರರು ಮರಳು ತೆಗೆಯಲು ಮುಂದಾದಾಗ ಪರಸ್ಪರ ಘರ್ಷಣೆ ಉಂಟಾಗಿ, ಗದ್ದಲದ ನಡುವೆ ಸಿಕ್ಕ ಮುತ್ತಪ್ಪ ಗೋವಿಂದಪ್ಪ ಕೊಂಚಿಗೇರಿ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡ ಆತನನ್ನು 108 ಆರೋಗ್ಯ ಕವಚದ ಮೂಲಕ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮರಳ ಸಾಗಿಸಲು ಟೆಂಡರ್ ಹಿಡಿದ ಕಕ್ಕೂರು, ಬೆಣ್ಣಿಹಳ್ಳಿ, ಕಕ್ಕೂರು ತಾಂಡಾದ ಕೆಲವು ಗುತ್ತಿಗೆದಾರರು ಈಚೆಗೆ ಮರಳು ನೀತಿಯನ್ವಯ ಅವಧಿ ಮೀರಿದ್ದರೂ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ತಹಸೀಲ್ದಾರ್, ಸಿಪಿಐ ಅವರಿಗೆ ಮನವಿ ನೀಡಿ ಒತ್ತಾಯಿಸಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎ.ಟಿ. ನರೇಗಲ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸಿದೆ. ಈ ವಿಷಯವಾಗಿ ಚರ್ಚಿಸಲು ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿದೆ. ಈ ಕುರಿತು ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಆರ್. ಹುಬ್ಬಳ್ಳಿಮಠ, ಸಿಪಿಐ ಸುನಿಲ ಸವದಿ ಮಾತನಾಡಿದರು.
ರಂಗಪ್ಪ ಕ್ಯಾದಗಿಹಳ್ಳಿ ಮಾತನಾಡಿ, ಉಸುಕು ಸಾಗಣೆ ವಿಷಯದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಇದನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ನದಿ ದಂಡೆಯಲ್ಲಿ ಗಲಾಟೆಗಳು ನಡೆಯುವ ಸಂಶಯವಿದೆ. ಮುಂಜಾಗ್ರತೆ ಕ್ರಮವಾಗಿ ಪೋಲಿಸರನ್ನು ನಿಯೋಜನೆ ಮಾಡಬೇಕೆಂದು ತಹಸೀಲ್ದಾರ್, ಸಿಪಿಐ ಅವರಲ್ಲಿ ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಮಾರುತಿ ಹಲವಾಗಲಿ, ಸುರೇಶ ಹಲವಾಗಲಿ, ವಿಠಲ್ ಗಣಾಚಾರಿ, ಅಂಬವ್ವ ಕಟ್ಟಿಮನಿ, ಮಲ್ಲೇಶ ಹರಿಜನ, ವೀರೇಶ ಶಾಸ್ತ್ರಿಮಠ, ನಾಗರಾಜ ಗುಡಿಮನಿ ಮುಂತಾದವರು ಪಾಲ್ಗೊಂಡಿದ್ದರು.