ರಾಜಕೀಯ ಪಕ್ಷಗಳಲ್ಲಿ ಸಂಚಲನ ಟಿಕೆಟ್‌ಗಾಗಿ ಅಭ್ಯರ್ಥಿಗಳ ಪೈಪೋಟಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 20
ಈಗಷ್ಟೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಸಿ ನಿರಾಳರಾಗಿದ್ದ ಜನತೆ ಹಾಗೂ ಮುಖಂಡರಿಗೆ ವಿಧಾನಸಭೆ ಚುನವಾಣೆಗೆ ದಿನಾಂಕ ಪ್ರಕಟವಾಗಿದ್ದು, ಮತ್ತೊಂದು ಚುನಾವಣಾ ಸಮರಕ್ಕೆ ಸಜ್ಜಾಗಬೇಕಾಗಿದೆ.
ಚುನಾವಣಾ ಆಯೋಗ ದಿಢೀರನೆ ವಿಧಾನಸಭೆ ಚುನಾವಣೆ ಘೋಷಿಸಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮೇ 5ರಂದು ಚುನಾವಣೆ ನಿಗದಿಯಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಗಳಲ್ಲಿ ದುಗುಡ ಹೆಚ್ಚಾಗಿದೆ.
ಟಿಕೆಟ್‌ಗಾಗಿ ಪೈಪೋಟಿ: ಈಗಾಗಲೇ ಟಿಕೆಟ್‌ಗಾಗಿ ಪಕ್ಷದ ವರಿಷ್ಠರ ಮುಂದೆ ಮಂಡಿಯೂರಿ ಕುಳಿತಿರುವ ಅಭ್ಯರ್ಥಿಗಳು ಶತಾಯ ಗತಾಯ ಟಿಕೆಟ್ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಯಿಂದ ಹಾಲಿ ಶಾಸಕರು ಸ್ಪರ್ಧಿಸುವುದು ಬಹುತೇಕ ಅಂತಿಮವಾಗುವ ಸಾಧ್ಯತೆ ನಿಚ್ಚಳವಾಗಿದೆ. ವಿರೋಧ ಪಕ್ಷ ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲನುಭವಿಸಿದ್ದ ಅಭ್ಯರ್ಥಿಗಳಿಗೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದ್ದು, ಆದ್ದರಿಂದ ಮತ್ತೆ ಹಳೆ ಅಭ್ಯರ್ಥಿಗಳ ನಡುವೆ ಕಾದಾಟ ಏರ್ಪಡುವ ಸಾಧ್ಯತೆ ಹೆಚ್ಚಿದೆ.
ಜಾತಿ ಆಧಾರದಲ್ಲಿ ಮತ: ರಾಜ್ಯದಲ್ಲಿ ಬಿಜೆಪಿ ಲಿಂಗಾಯತರ ಪಕ್ಷ, ಜೆಡಿಎಸ್ ಒಕ್ಕಲಿಗರ ಪಕ್ಷ ಹಾಗೂ ಕಾಂಗ್ರೆಸ್ ಇನ್ನುಳಿದ ಜಾತಿಯವರ ಪಕ್ಷ ಏನ್ನುವ ರೀತಿಯಲ್ಲಿ ಕಳೆದ ಚುನಾವಣೆಯಲ್ಲಿ ಜನತೆ ಫಲಿತಾಂಶ ನೀಡಿದ್ದರು. ಆದರೆ, ಈ ಬಾರಿ ಬಿಎಸ್‌ವೈ ಹಾಗೂ ಬಿ. ಶ್ರೀರಾಮುಲು ಬಿಜೆಪಿಯಿಂದ ಸಿಡಿದು ಹೊರ ಬಂದಿದ್ದಾರೆ. ಬಿಜೆಪಿಗೆ ಲಿಂಗಾಯತ ಹಾಗೂ ಹಿಂದುಳಿದ ಮತಗಳು ಲಭ್ಯವಾಗುವ ಸಾಧ್ಯತೆ ಕಡಿಮೆ. ಜೆಡಿಎಸ್ ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮತಗಳನ್ನು ನಂಬಿಕೊಂಡಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ತೃಪ್ತಿ ಪಟ್ಟುಕೊಳ್ಳುವ ರೀತಿಯಲ್ಲಿ ಸಾಧನೆ ಮಾಡಿದೆ. ಅದೇ ಮಾದರಿಯಲ್ಲಿಯೇ ಎಲ್ಲ ಸಮುದಾಯದವರು ಮತ ನೀಡಲಿದ್ದಾರೆ ಎನ್ನುವ ನಿರೀಕ್ಷೆ ಕಾಂಗ್ರೆಸ್ ಪಕ್ಷ ಹೊಂದಿದೆ.
ಆಯ್ಕೆ ಅಂತಿಮ ಹಂತದಲ್ಲಿ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿ ಕ್ಷೇತ್ರವು ಮೀಸಲು ಕ್ಷೇತ್ರವಾಗಿದೆ. ಇನ್ನುಳಿದ 3 ಕ್ಷೇತ್ರಗಳು ಸಾಮಾನ್ಯ ಸ್ಥಾನಗಳಿಗೆ ಮೀಸಲಾಗಿವೆ. ಬಹುತೇಕ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದಾರೆ. ಆದರೆ, ಬಂಡಾಯ ಭುಗಿಲೇಳುವ ಹಿನ್ನೆಲೆಯಲ್ಲಿ ಹೆಸರನ್ನು ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಬುಧವಾರ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಪಕ್ಷಗಳು ತರಾತುರಿಯಲ್ಲಿ ಸಿದ್ಧತೆ ಪ್ರಾರಂಭಿಸಿವೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದು ಎಲ್ಲ ಪಕ್ಷಗಳ ಜಿಲ್ಲಾಧ್ಯಕ್ಷರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.