ಹಕ್ಕು, ಕರ್ತವ್ಯಗಳ ಅರಿವಿರಲಿ: ಶಶಿಧರ
ಗದಗ: ಪ್ರತಿಯೊಬ್ಬ ಗ್ರಾಹಕನು ಜಾಗೃತನಾಗಬೇಕಲ್ಲದೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಬೇಕಾದದ್ದು ಅವಶ್ಯ. ಅಂದಾಗ ಮಾತ್ರ ತಮಗಾಗುವ ವಂಚನೆಯಿಂದ ಹೊರಬರಲು ಸಾಧ್ಯವೆಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಶಿಧರ ಕುರೇರ ಹೇಳಿದರು.
ಅವರು ಈಚೆಗೆ ನಗರದ ಕಳಸಾಪುರ ರಸ್ತೆಯಲ್ಲಿರುವ ಜ. ಶಿವಾನಂದ ಪಪೂ ಮಹಾವಿದ್ಯಾಲಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನಾಶಾಸ್ತ್ರ ಮತ್ತು ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಗ್ರಾಹಕರಿಗೆ ತಮ್ಮ ಹಕ್ಕಿನ ಬಗ್ಗೆ ಮಾಹಿತಿ ನೀಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಬಿ.ದುರ್ಗಪ್ಪ ಗ್ರಾಹಕರ ರಕ್ಷಣಾ ಕಾಯ್ದೆ ಕುರಿತು ಮಾತನಾಡಿದರು. ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯೆ ಶ್ಯಾಮಲಾ ಮಾಣಿಕ್ಯಾಲರಾವ್, ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯ ಎಫ್.ಪಿ. ಲಕ್ಷ್ಮೇಶ್ವರಮಠ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿದರು. ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ತಿಪ್ಪಣ್ಣ ವರ್ತೂರಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ. ಕೋಟಿ ಸ್ವಾಗತಿಸಿದರು. ಉಪನ್ಯಾಸಕ ಮುಲ್ಕಗೌಡ್ರ ನಿರೂಪಿಸಿದರು. ಮಲಕಣ್ಣವರ ವಂದಿಸಿದರು.