ನೀತಿ ಸಂಹಿತೆ: ಅಭಿವೃದ್ಧಿಗೆ ಅಡ್ಡಿ?
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಆಡಳಿತಾರೂಢ ಬಿಜೆಪಿ ಸರ್ಕಾರದ ಶಾಸಕರು ವಿಧಾನಸಭೆ ಚುನಾವಣೆಯ ಪೂರ್ವದಲ್ಲಿಯೇ ತಮ್ಮ, ತಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಸಿಎಂ ಶೆಟ್ಟರ್ ಮೇಲೆ ಒತ್ತಡ ತಂದು, ಹಲವಾರು ಹೊಸ ಯೋಜನೆಗಳ ಅನುಷ್ಠಾನಕ್ಕೆ ಯೋಜನೆ ರೂಪಿಸಿದ್ದರು. ಆದರೆ, ಇದಕ್ಕೆ ಕೇಂದ್ರ ಚುನಾವಣಾ ಆಯೋಗ ನೀತಿ ಸಂಹಿತೆಯ ಮೂಲಕ ಬ್ರೇಕ್ ಹಾಕಿದೆ.
ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಈ ರೀತಿಯ ಒತ್ತಡ ತಂದು, ಏಪ್ರಿಲ್ 10 ರಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸುತ್ತಿದ್ದರೂ ನೀತಿ ಸಂಹಿತೆಯನ್ನು ಮಾತ್ರ ಬುಧವಾರದಿಂದಲೇ ಜಾರಿಗೆ ತಂದಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಗದಗ ಜಿಲ್ಲೆಯಲ್ಲಿ ಹೆಚ್ಚು: ಬಿಜೆಪಿ ಸರ್ಕಾರ ಸದ್ಯದಲ್ಲಿಯೇ ಇನ್ನೊಂದು ಸಂಪುಟ ಸಭೆಯನ್ನು ನಡೆಸುವ ತಯಾರಿಯಲ್ಲಿದ್ದಾಗಲೇ, ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಿರುವುದು ಬಿಜೆಪಿ ಶಾಸಕರಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಉತ್ತರ ಕರ್ನಾಟಕದ ಜಗದೀಶ ಶೆಟ್ಟರ್ ಅವರು ಸಿಎಂ ಆಗಿರುವುದರಿಂದ ಮತ್ತು ಹಾಲಿ ನಾಲ್ವರು ಶಾಸಕರು ಸಿಎಂಗೆ ಆಪ್ತರಾಗಿರುವುದರಿಂದ ಹಲವಾರು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದರು. ಆದರೆ, ವಿಪರ್ಯಾಸವೆಂದರೆ ಸರ್ಕಾರ ಮಂಜೂರು ಮಾಡಿದ ಕಾಮಗಾರಿಗಳಿಗೂ ಭೂಮಿಪೂಜೆ ಮಾಡದಂತಹ ಸ್ಥಿತಿ ಈಗ ನಿರ್ಮಾಣವಾಗಿದೆ.
ನೆನೆಗುದಿಗೆ: ಮಾರ್ಚ್ 12 ರಂದು ಗದಗ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಸೇರಿದಂತೆ ಜಿಲ್ಲೆಯ 3 ಶಾಸಕರು ಎಲ್ಲ ಅಧಿಕಾರಿಗಳಿಗೆ, ಯಾವುದೇ ಕ್ಷಣದಲ್ಲಾದರೂ ಚುನಾವಣೆಯ ದಿನಾಂಕ ಘೋಷಣೆಯಾಗಬಹುದು, ಅದಕ್ಕಾಗಿ ನಾವು ಕ್ಷೇತ್ರದಲ್ಲಿ ರೂಪಿಸಿರುವ ಯೋಜನೆಗಳು ಚುನಾವಣೆಯ ಕಾರಣದಿಂದಾಗಿ ಸಾರ್ವಜನಿಕರಿಂದ ದೂರವಾಗುವಂತಾಗಬಾರದು. ನಮಗಾಗಿ ಕಾಯದೇ ಸಾಧ್ಯವಾದಷ್ಟು ಬೇಗನೆ ಯೋಜನೆಗಳಿಗೆ ಚಾಲನೆ ನೀಡಿರಿ ಎಂದು ಸೂಚಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ ಎಂದಿನ ತಮ್ಮ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಆಡಳಿತಾರೂಢ ಶಾಸಕರಿಗೆ ದೊಡ್ಡ ತಲೆ ನೋವಾಗಿದೆ.
ಕುಡಿಯುವ ನೀರಿನ ಸಮಸ್ಯೆ ತೀವ್ರ: ಜಿಲ್ಲೆಯ ಬಹುತೇಕ ಗ್ರಾಮೀಣ ಮತ್ತು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇಂದು ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಇದಕ್ಕೆ ಸ್ಪಂದಿಸಬೇಕಾದ ಶಾಸಕರುಗಳು ತಮ್ಮ ಚುನಾವಣಾ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುವುದರಿಂದ, ಅಧಿಕಾರಿಗಳಿಗೆ ಸೂಚನೆ ನೀಡುವವರ್ಯಾರು ? ಅವರು ಕೆಲಸ ಮಾಡದೇ ಇದ್ದಲ್ಲಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವವರ್ಯಾರು ಎನ್ನುವುದು ಸ್ವತ ಶಾಸಕರಿಗೇ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಇನ್ನು ಜಿಲ್ಲೆಯ ಹಿರಿಯ (ಜಿಲ್ಲಾಧಿಕಾರಿ) ಅಧಿಕಾರಿಗಳು ಸುಸೂತ್ರ ಚುನಾವಣೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಂಭವ ಇದೆ.
ಯೋಜನೆಗಳ ಚಾಲನೆಗೆ ಬ್ರೇಕ್: ಹಾಲಿ ಶಾಸಕರುಗಳು ಚುನಾವಣಾ ಆಯೋಗ ಮಾರ್ಚ್ ಬಳಿಕ ನೀತಿ ಸಂಹಿತೆ ಘೋಷಣೆ ಮಾಡುತ್ತದೆ ಎನ್ನುವ ಲೆಕ್ಕಾಚಾರದಲ್ಲಿ 37ಕ್ಕೂ ಹೆಚ್ಚು (4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮಾಹಿತಿ ಆಧಾರದಲ್ಲಿ) ಅಭಿವೃದ್ಧಿ ಕಾರ್ಯಕ್ರಮಗಳ ಭೂಮಿಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಚುನಾವಣಾ ಆಯೋಗ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಗೆ ಮಾಡಿದ್ದರಿಂದ ಶಾಸಕರುಗಳ ಅಭಿವೃದ್ಧಿ ಯೋಜನೆಗಳ ಚಾಲನೆಯ ಆಸೆಗೆ ತಣ್ಣೀರೆರಚಿದಂತಾಗಿದೆ.
ಇದರಿಂದ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿಗೆ ಅನುದಾನ ಬಂದರೂ ಅದನ್ನು ಹೇಳದಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್ ರಾಜ್ಯ ಬಿಜೆಪಿಗೆ ಈ ರೀತಿಯ ಆಘಾತ ನೀಡಿತೇ ಎನ್ನುವ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.