ಮಹನೀಯರ ನೆನಪಿಗೆ ಸ್ಮಾರಕ: ಪಾಟೀಲ್
ಕನ್ನಡಪ್ರಭ ವಾರ್ತೆ, ರೋಣ, ಮಾ. 21
ದೇಶ ಮತ್ತು ನಾಡಿಗೆ ಅಭೂತ ಪೂರ್ವ ಸಾಧನೆ ಮತ್ತು ಕೊಡುಗೆ ನೀಡಿದ ಮಹನೀಯರನ್ನು ನೆನೆಯಲು ಮತ್ತು ಐತಿಹಾಸಿಕ ಸಂಗತಿಗಳ ಕುರಿತು ತಿಳಿದುಕೊಳ್ಳಲು ಸ್ಮಾರಕಗಳ ನಿರ್ಮಾಣ ಅತ್ಯಗತ್ಯ. ಆ ದಿಶೆಯಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗ್ರಾಪಂ ಆಶ್ರಯದಲ್ಲಿ ನಡೆದ ಕವಿ ಪುರೋಹಿತ ಆಲೂರು ವೆಂಕಟರಾಯರ ಬೃಹತ್ ಸ್ಮಾರಕ ಭವನ ಹಾಗೂ ವಾಣಿಜ್ಯ ಮಳಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ 9 ವರ್ಷಗಳ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಜನತೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಬಂಡಾಯದ ನರಗುಂದ ಬಾಬಾ ಸಾಹೇಬ ಅರಮನೆಯನ್ನು ಮೂಲ ಸ್ವರೂಪದಲ್ಲಿ ನವೀಕರಿಸಲಾಗಿದೆ. ಇತಿಹಾಸ ಪ್ರಸಿದ್ಧ ನರಗುಂದದ ಕೆಂಪ ಅಗಸಿ ನವೀಕರಣ, ಬಾಬಾಸಾಹೇಬ ಮೂರ್ತಿಗೆ ಮೇಲ್ಛಾವಣಿ, ನಾಡ ಕಂಡ ಹುಯಿಲಗೋಳ ನಾರಾಯಣ, ವಿಷ್ಣುಪಂತ, ಕವಿ ಪುರೋಹಿತ ಆಲೂರ ವೆಂಕಟರಾಯ ಸ್ಮಾರಕ ಭವನ ಸೇರಿದಂತೆ ಹಲವಾರು ಮಹನೀಯರ ಸ್ಮಾರಕಗಳನ್ನು ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ ಎಂದರು. ಹೊಳೆ ಆಲೂರಿನಲ್ಲಿ ರು. 1.25 ಕೋಟಿ ವೆಚ್ಚದಲ್ಲಿ ಆಲೂರು ವೆಂಕಟರಾಯರ ಸ್ಮಾರಕ ಭವನ ನಿರ್ಮಿಸಲಾಗಿದೆ. ಈ ಭವನ ನಿರ್ಮಾಣವಾಗಲು ಬಿ.ಎಸ್. ಯಡಿಯೂರಪ್ಪನವರ ಸಹಕಾರ ಮೆಚ್ಚಬೇಕು. ಪಕ್ಷ ಯಾವುದೇ ಇರಲಿ ಅವರು ಮಾಡಿದ ಸಹಾಯ, ಸಹಕಾರ ನಾವೆಂದಿಗೂ ಮರೆಯದೇ ನೆನೆಯಬೇಕು. ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರವಾಗಿಸಬಾರದು. ಇತಿಹಾಸದ ಪರಂಪರೆಯ, ಸಂಸ್ಕೃತಿ ತಿಳಿಸಬೇಕು. ಆ ದಿಶೆಯಲ್ಲಿ ಮಕ್ಕಳಿಗೆ ದೀರ್ಘ ಶಿಕ್ಷಣ ನೀಡಿ ಇತಿಹಾಸ ಪ್ರಜ್ಞೆ ಬೆಳೆಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಪ್ರಭಾರಿ ಅಧ್ಯಕ್ಷ ಜಗದೀಶ ಬ್ಯಾಡಗಿ ಮಾತನಾಡಿದರು. ಸಾನ್ನಿಧ್ಯವನ್ನು ಯಚ್ಚರೇಶ್ವರ ಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ರುದ್ರವ್ವ ತಾಳಿ, ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ, ಬಸವರಾಜ ಕವಾಸ್ತ, ಆರ್.ಎಸ್. ಮಡಿವಾಳರ, ಉಮೇಶ ಪೂಜಾರ, ಎಸ್.ಬಿ. ಮುದಿಗೌಡ್ರ, ವೈ.ಎಂ. ಬ್ಯಾಡಗಿ, ಡಾ. ಡಿ.ಕೆ. ಕುಲಕರ್ಣಿ, ಅಲ್ಲಿಸಾಬ ಬಸಪುರ, ಪಾರ್ವತಿ ಸಾಸಳ್ಳಿ, ಆರ್.ಬಿ. ಕಡಬಿನಕಟ್ಟಿ, ಬಿ.ವಿ. ಪತ್ತಾರ, ಆರ್.ಶ್ರೀನಿವಾಸ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಆರ್.ಬಿ. ಮಡಿವಾಳರ ಸ್ವಾಗತಿಸಿ, ವಂದಿಸಿದರು.