ಮಹಿಳಾ ಸಾಂತ್ವನ ಕೇಂದ್ರ ಆರಂಭ
ಗಜೇಂದ್ರಗಡ: ರಾಜ್ಯ ಸರ್ಕಾರ ಮಹಿಳೆಯರು ಆರ್ಥಿಕ-ಸಾಮಾಜಿಕವಾಗಿ ಅಭಿವೃದ್ದಿ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಹಲವಾರು ಯೋಜನೆ ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪುರಸಭೆ ಸದಸ್ಯ ಸಿದ್ದಪ್ಪ ಬಂಡಿ ಕರೆ ನೀಡಿದರು.
ಪಟ್ಟಣದ ರೋಣ ರಸ್ತೆ ಬಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರವನ್ನು ಉದ್ಘಾಟಿಸಿದ ಅವರು, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹೆಚ್ಚುತ್ತಿದ್ದು, ಮಹಿಳೆ ಜರ್ಝರಿತಳಾಗಿ ಮಾನಸಿಕ ಯಾತನೆ ಅನುಭವಿಸುತ್ತಿದ್ದಾಳೆ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆ ಅಬಲೆಯಲ್ಲ ಎಂಬುದನ್ನು ಸಾಬೀತುಪಡಿಸಲು ಪುರುಷರೂ ಸಹಕರಿಸದರೆ ಸ್ವಾವಲಂಬಿ ಜೀವನ ಸಾಧ್ಯ. ಈ ದೆಸೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರ ತೆರೆಯಲಾಗಿದ್ದು, ಮಹಿಳೆಯರು ತಮ್ಮ ಸಮಸ್ಯೆಗಳಿದ್ದಕೆ 1091ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಅಕ್ಕಮಹಾದೇವಿ ಸಜ್ಜನರ, ಬಾಬು ಕಾತರಕಿ, ಬಿ.ಎಂ. ಸಜ್ಜನರ, ಚಂದಾಲಿಂಗಪ್ಪ ಬೀಳಗಿ, ರುದ್ರಪ್ಪ ಸಂಗನಾಳದ ಉಪಸ್ಥಿತರಿದ್ದರು.