ವಸ್ತ್ರಸಿರಿ ಮೇಳ ಸದುಪಯೋಗಪಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಮಾ. 21 ರಿಂದ 25 ರವರೆಗೆ ನಡೆಯುತ್ತಿರುವ ಜಿಲ್ಲಾ ಮಟ್ಟದ ಕೈಮಗ್ಗ ಮೇಳ ವಸ್ತ್ರಸಿರಿ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.
ಅವರು ಗುರುವಾರ ಸಂಜೆ ನಗರದ ಜ. ತೋಂಟದಾರ್ಯ ಮಠದ ಆವರಣದಲ್ಲಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರ ಹಾಗೂ ಜಿಪಂನ ಕೈಮಗ್ಗ ಮತ್ತು ಜವಳಿ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ವಸ್ತ್ರಸಿರಿ-2013ಗೆ ಚಾಲನೆ ನೀಡಿ ಮಾತನಾಡಿದರು.
ಗದಗ ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಕೈಮಗ್ಗ ನೇಕಾರ ಸಹಕಾರಿ ಸಂಘಗಳು ಹಾಗೂ ಎನ್ಜಿಓಗಳು ಉತ್ಪಾದಿಸುವ ಕೈಮಗ್ಗದ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅನುಕೂಲವಾಗುವಂತೆ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಜಿಲ್ಲಾಮಟ್ಟದ ಕೈಮಗ್ಗ ಮೇಳವನ್ನು ಏರ್ಪಡಿಸಲಾಗಿದೆ.
ಇಲ್ಲಿ ವಿವಿಧ ನೇಕಾರ ಸಹಕಾರ ಸಂಘ, ಸಂಸ್ಥೆಗಳು ತಮ್ಮ ಕೈಮಗ್ಗಗಳಲ್ಲಿ ತಯಾರಾದ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಅನುಕೂಲವಾಗುವಂತೆ ಎಲ್ಲ ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸಿರುವುದು ಸ್ವಾಗತಾರ್ಹಗಿದೆ ಎಂದರು. 5 ದಿನಗಳವರೆಗೆ ನಡೆಯುವ ಈ ಮೇಳದಲ್ಲಿ ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳುವ ಮೂಲಕ ಮೇಳವನ್ನು ಯಶಸ್ವಿಗೊಳಿಸಬೇಕೆಂದರು.
ಮೇಳದಲ್ಲಿ 20ಕ್ಕೂ ಅಧಿಕ ಸ್ಟಾಲ್ಗಳನ್ನು ನಿರ್ಮಿಸಲಾಗಿದ್ದು, ಹಾವೇರಿ, ಬಾಗಲಕೋಟ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಕೈಮಗ್ಗ ಸಂಸ್ಥೆಗಳು ಆಗಮಿಸಿವೆ. ಕೈಮಗ್ಗ ಉತ್ಪನ್ನಗಳಾದ ಟಾವೆಲ್, ಲುಂಗಿ, ಬೆಡ್ಶೀಟ, ಕಂಬಳಿ, ಜಮಖಾನೆ, ಕಸೂತಿ ಸೀರೆ, ಇಳಕಲ್ಲ ಸೀರೆ ಹಾಗೂ ಅಪ್ಪಟ ರೇಷ್ಮೆ ಸೀರೆ, ಹಾಸಿಗೆ ಹೊದಿಕೆ ಸೇರಿದಂತೆ ಹಲವು ಕೈಮಗ್ಗ ವಸ್ತುಗಳಿವೆ.
ಜಿಪಂನ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎನ್.ಟಿ. ನೆಗಳೂರ, ಜಿಪಂನ ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಪ್ರವರ್ಧನಾಧಿಕಾರಿ ಎಸ್.ಎನ್. ಕುಂಬಾರ, ಎ.ಎಸ್. ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.