ಹಿಂಸೆಯ ದುಷ್ಫಲ ಸಾರುವ ಯಶೋಧರ ಚರಿತೆ: ಕಲ್ಲನಗೌಡರ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಜನ್ನನ ಯಶೋಧರ ಚರಿತೆ ಕೃತಿ ಸಮಾಜದಲ್ಲಿ ಕಂಡುಬರುವ ಹಿಂಸೆಯ ದುಷ್ಫಲ, ಅಹಿಂಸೆಯ ಸತ್ಫಲವನ್ನು ಸಾರಿ, ನಿರ್ಮಲ ಮನಸ್ಸಿನಿಂದ ಬದುಕಬೇಕೆಂಬ ತತ್ವ ಸಾರುತ್ತದೆ ಎಂದು ಗದುಗಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಆರ್.ಎಂ. ಕಲ್ಲನಗೌಡರ ಅಭಿಪ್ರಾಯಪಟ್ಟರು.
ಗದಗ ಜಿಲ್ಲಾ ಕಸಾಪ ವತಿಯಿಂದ ಸ್ಥಳೀಯ ಜಿಲ್ಲಾ ಕಸಾಪ ಕಚೇರಿಯಲ್ಲಿ ಇತ್ತೀಚೆಗೆ ನಡೆದ 'ಶನಿವಾರ ಸಾಹಿತ್ಯ ಸಂಜೆ' ಕಾರ್ಯಕ್ರಮಲ್ಲಿ 'ಜನ್ನನ ಯಶೋಧರ ಚರಿತೆಯ ವೈಶಿಷ್ಟ್ಯ', 'ಜನ್ನ ರತಿ ವಿಲಾಸ' ಕುರಿತು ಅವರು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯದಲ್ಲಿ ಯಶೋಧರ ಚರಿತೆ ಕಾವ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಈ ಕಾವ್ಯವನ್ನು ಬರೆದ ಜನ್ನ ಕವಿ ಚಕ್ರವರ್ತಿ, ಉದಾತ್ತ ಶೈಲಿಯಲ್ಲಿ ರಚಿತವಾದ ಯಶೋಧರ ಚರಿತೆ 310 ಪದ್ಯಗಳು, 4 ಅವತಾರಗಳಲ್ಲಿ ಹರಡಿಕೊಂಡ ಸಣ್ಣಗಾತ್ರದ ಕಾವ್ಯ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯಿಂದ ಶಾಶ್ವತ ಸ್ಥಾನ ಪಡೆದಿರುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ, ಸಲಹಾ ಮಂಡಳಿ ಸದಸ್ಯ ಪ್ರೊ. ಕೆ.ಎಚ್. ಬೇಲೂರ, ಮಲ್ಲಣ್ಣ ರಾಟಿ, ತಾರಾ ಬಿ.ಎನ್., ವಿಜಯಾ ಹಿರೇಮಠ, ಕೆ.ಕೆ. ಹೂಗಾರ, ದತ್ತಪ್ರಸನ್ನ ಪಾಟೀಲ್, ಎಂ.ಎಲ್. ಗೌಡಪ್ಪಗೌಡರ, ಚಿಕ್ಕಮಠ, ವಿ.ಎ. ನಿಂಗೋಜಿ, ಮಂಜುನಾಥ ಜೋಬಾಳೆ, ಜಿ.ಎಸ್. ಯತ್ನಟ್ಟಿ, ತಾಲೂಕಾಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಪೂಜಾರ ಪ್ರಾರ್ಥಿಸಿದರು. ಡಿ.ಎಸ್. ತಳವಾರ ಸ್ವಾಗತಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಚ್.ಬಿ. ಪೂಜಾರ ವಂದಿಸಿದರು.