ಪಾಳು ಬಿದ್ದ ಜಾಗೆ ಹೂದೋಟವಾಯಿತು!
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 22
ಪಟ್ಟಣದ ಪುರಸಭೆ ಕಾರ್ಯಾಲಯದ ಎದುರಿಗೆ ಇರುವ ಖಾಲಿ ಜಾಗೆ ಕೆಲವು ತಿಂಗಳ ಹಿಂದೆ ಸಾರ್ವಜನಿಕರ ಬಹಿರ್ದೆಸೆ, ಮೂತ್ರ ವಿಸರ್ಜನೆಯ ತಾಣವಾಗಿ ಪಾಳುಬಿದ್ದಿತ್ತು. ಇದನ್ನು ಗಮನಿಸಿದ ಪುರಸಭೆಯ ಅಧಿಕಾರಿ ಎಸ್. ರಾಜಶೇಖರ ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಭಾಗದಲ್ಲಿ ಸುಂದರ ಹೂ ತೋಟ ಮಾಡಿದ್ದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
ಪುರಸಭೆಯ ಎದುರಿಗೆ ಇರುವ ಖಾಲಿ ಜಾಗೆಯನ್ನು ಈ ಪ್ರದೇಶದ ಜನ ಬಹಿರ್ದೆಸೆಗೆ ಬಳಸುತ್ತಿದ್ದರು. ಸಾರ್ವಜನಿಕರು ಪುರಸಭೆಗೆ ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ಇತ್ತು. ಹಂದಿಗಳ ಕಾಟ ಹೇಳತೀರದಂತಾಗಿತ್ತು. ಇದನ್ನರಿತ ಪುರಸಭೆ ಅಧಿಕಾರಿ ರಾಜಶೇಖರ, ಈ ಸ್ಥಳದಲ್ಲಿ ಸುಂದರ ಹೂದೋಟ ನಿರ್ಮಿಸಬೇಕೆಂದು ಸಂಕಲ್ಪ ಮಾಡಿದರು. ಸಿಬ್ಬಂದಿ ಜತೆ ತಾವೂ ನಿಂತು ಜಾಗೆ ಸ್ವಚ್ಛಗೊಳಿಸಿದರು. ಜಾಗೆಯ ಸುತ್ತಲೂ ತಂತಿ ಜಾಳಿಗೆ ಹಾಕಿಸಿ, ಹೂವಿನ ಸಸಿಗಳನ್ನು ನೆಡಿಸಿದರು. ನೆಲ ಹಾಸಿಗೆ ಹುಲ್ಲು ಹಚ್ಚಿದರು. ಈಗ ಈ ಜಾಗೆ ನಳನಳಿಸುತ್ತಿದೆ.
ಪರಿಸರ ಪ್ರೀತಿ: ಪಟ್ಟಣದ 23 ವಾರ್ಡಗಳಿಗೆ ನೀರು ಪೂರೈಕೆ, ಚರಂಡಿ ವ್ಯವಸ್ಥೆ, ಜನತೆಗೆ ಬೇಕಾದ ಮೂಲಭೂತ ಸೌಲಭ್ಯ ದೊರಕಿಸಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕಾಗುತ್ತೆ. ಈ ಎಲ್ಲ ಕೆಲಸಗಳ ಮಧ್ಯೆಯೇ ಈ ಅಧಿಕಾರಿ ಪರಿಸರ ಪ್ರೀತಿ ಬೆಳೆಸಿಕೊಂಡು ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
-ಎಸ್.ಜಿ. ತೆಗ್ಗಿನಮನಿ