ಬಸವ ತತ್ವ ಪಾಲನೆ ಅನಿವಾರ್ಯ: ತೋಂಟದ ಶ್ರೀ
ಗದಗ: ಬಸವ ತತ್ವ ಎಂಬುದು ಒಂದು ರಾಜ್ಯ, ಒಂದು ದೇಶಕ್ಕೆ ಸೀಮಿತವಾಗಿರದೆ, ಇಡೀ ವಿಶ್ವವೇ ಅನುಸರಿಸಬೇಕಾದ ಕಾಲ ಬಂದಿದೆ. ಇಲ್ಲದಿದ್ದರೆ ದೂರದ ಇಂಗ್ಲೆಂಡ್ ದೇಶದ ಥೇಮ್ಸ್ ನದಿ ದಂಡೆಯ ಮೇಲೆ ಬಸವೇಶ್ವರರ ಪುತ್ಥಳಿ ಸ್ಥಾಪನೆ ಆಗುತ್ತಿರಲಿಲ್ಲ ಎಂದು ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಅವರು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಶರಣ ಸಂಸ್ಕೃತಿ ಉತ್ಸವದ ಮಹಾಯಾತ್ರೆ ನಿಮಿತ್ತ ನಗರದಲ್ಲಿ ನಡೆದ ಮೆರವಣಿಗೆಗೆ ಚಾಲನೆ ನೀಡಿ, ತದನಂತರ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಬಸವತತ್ವ ಇಂದಿನ ಕಾಲದ ಅನಿವಾರ್ಯತೆ ಆಗಿರುವುದರಿಂದ ಅದರ ಪ್ರಸಾರದ ವೇಗಕ್ಕೆ ಯಾವುದೇ ಮೂಲಭೂತವಾದಗಳು ತಡೆಯಲಾರವು ಎಂದು ಅಭಿಪ್ರಾಯಪಟ್ಟರು. 12ನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಬಸವತತ್ವ ಹಾಗೂ ಭಾರತದ ಸಂವಿಧಾನದ ಸದಾಶಯಗಳೆಲ್ಲ ಒಂದೇ ಆಗಿವೆ. ಬಸವ ತತ್ವದಂತೆ ಡಾ. ಅಂಬೇಡ್ಕರ್ ಬರೆದ ಸಂವಿಧಾನ ಕೂಡ ಸಮಾನತೆ, ಶೋಷಿತರ ಅಭಿವೃದ್ಧಿ, ಜಾಗೃತಿ, ಅಭಿವೃದ್ಧಿಯ ಜತೆಗೆ ಜಾತ್ಯತೀತತೆಯನ್ನು ಸಾರುವುದು. ಬಸವ ತತ್ವವನ್ನು ವಿರೋಧಿಸುವುದೆಂದರೆ ಭಾರತದ ಸಂವಿಧಾನದ ಸಿದ್ಧಾಂತವನ್ನು ವಿರೋಧಿಸಿದಂತೆ ಎಂದು ಶ್ರೀಗಳು ಹೇಳಿದರು.
ಪ್ರಶಂಸೆ: ಭಾರತದ ಉಪರಾಷ್ಟ್ರಪತಿಯಾಗಿ, ರಾಜ್ಯದ ವಿತ್ತ ಸಚಿವರಾಗಿ, ಬಸವ ತತ್ವನಿಷ್ಠ ಬದುಕು ಸವೆಸಿದ ಬಿ.ಡಿ. ಜತ್ತಿ ಅವರು ಬಸವ ಸಮಿತಿ ಸ್ಥಾಪನೆ ಮಾಡಿ, ಬಸವ ತತ್ವ ಪ್ರಸಾರದ ದೇವಾಲಯ ಕಟ್ಟಿದರೆ ಅವರ ಪುತ್ರರಾದ ಅರವಿಂದ ಜತ್ತಿ ಅವರು ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಬಸವನಬಾಗೇವಾಡಿಯಿಂದ ಕೂಡಲ ಸಂಗಮದ ವರೆಗೆ 33 ದಿನಗಳ 4,950 ಕಿ.ಮೀ. ದೂರದ ಶರಣ ಸಂಸ್ಕೃತಿ ಯಾತ್ರೆ ನಡೆಸಿ, ಕಳಸಪ್ರಾಯ ಕೆಲಸ ಮಾಡಿದ್ದಾರೆ. ಬಸವ ಸಮಿತಿಯಿಂದ ದೇಶದ 10 ಪ್ರಮುಖ ಭಾಷೆಗಳಲ್ಲಿ ವಚನಗಳನ್ನು ಪ್ರಕಟಿಸುವ ಗ್ರಂಥ ಸೇವೆ ಮೂಲಕ ಬಸವತತ್ವ ಪ್ರಸಾರಕ್ಕೆ ಹೊಸ ಹರವು ನೀಡಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಬಸವ ಸಮಿತಿ ಅಧ್ಯಕ್ಷ, ಶರಣ ಸಂಸ್ಕೃತಿ ಮಹಾಯಾತ್ರೆ ರೂವಾರಿ ಅರವಿಂದ ಜತ್ತಿ, ಬಸವ ಸಮಿತಿಯಿಂದ ಪ್ರಕಟಿತ ಗ್ರಂಥಗಳನ್ನು ತೋಂಟದ ಶ್ರೀಗಳಿಗೆ ಸಮರ್ಪಿಸಿ ಮಾತನಾಡಿ, ಬಸವಾದಿ ಶರಣರ ತತ್ವ, ಸಿದ್ಧಾಂತಗಳು ಇಡೀ ಮಾನವ ಕುಲದ ಅಭಿವೃದ್ಧಿಗೆ ಸಾಧನವಾಗಿವೆ. ಶರಣರ ತತ್ವಗಳ ಅನುಸರಣೆ ಇಂದಿನ ಬಹುದೊಡ್ಡ ಆವಶ್ಯಕತೆಯಾಗಿದೆ. ಶರಣ ಸಂಸ್ಕೃತಿಯುಕ್ತ ಜೀವನ ನಮ್ಮೆಲ್ಲರದ್ದಾಗಬೇಕು ಎಂಬುದು ಈ ಯಾತ್ರೆಯ ಸದುದ್ದೇಶವಾಗಿದೆ ಎಂದರು. ಅನುಭವ ಸಂಗಮದ ಸಂಚಾಲಕ ಜಗನ್ನಾಥ ಪಡಸಾಲಿ ಮಾತನಾಡಿದರು.
ಶಾರದಾ ಜತ್ತಿ, ಮಹಾಲಿಂಗೇಶ್ವರ ಅಥಣಿ, ಎಸ್.ಬಿ. ಸಂಕಣ್ಣವರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ತೋಂಟದಾರ್ಯ ಜಾತ್ರೆ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿ, ವಿದ್ಯಾಧರ ದೊಡ್ಡಮನಿ, ಅ.ಓಂ. ಪಾಟೀಲ, ಬಿ.ಎನ್. ಯರನಾಳ, ಮಾರ್ತಾಂಡಪ್ಪ ಹಾದಿಮನಿ ಉಪಸ್ಥಿತರಿದ್ದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಎಂ.ಎ. ಹಂಚನಾಳ ಕಾರ್ಯಕ್ರಮ ನಿರೂಪಿಸಿದರು.