ಶಿರಹಟ್ಟಿ- ಬಿಎಸ್ಸಾರ್ ವಿರುದ್ಧ ಗೆಲ್ಲುವ ಸಾಮರ್ಥ್ಯ ಯಾರಿಗೂ ಇಲ್ಲ: ಗಂಗಣ್ಣ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 23
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ವಿರುದ್ಧ ಗೆಲ್ಲುವ ಸಾಮರ್ಥ್ಯ ವಿಪಕ್ಷಗಳಿಗೆ ಇಲ್ಲ. ನಮ್ಮನ್ನು ಸೋಲಿಸುವ ತಾಕತ್ತಿದ್ದರೆ ಬಹಿರಂಗ ಸವಾಲಿಗೆ ನಾವು ಸಿದ್ಧ ಎಂದು ಮಾಜಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ್ ಹೇಳಿದರು.
ಪಟ್ಟಣದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಪಟ್ಟಣದ ಪುರಸಭೆಯ ಚುನಾವಣೆಯಲ್ಲಿ ಗೆದ್ದ ಸದಸ್ಯರು ಹಾಗೂ ಸೋತ ಸ್ಪರ್ಧಾಳುಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪುರಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನ ಸಾಮಾನ್ಯರ ಮನ ಗೆಲ್ಲುವಂತ ಕಾರ್ಯ ಮಾಡಬೇಕು. ಬಡವರ, ನೊಂದವರ ಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಸೋತವರು ಸುಮ್ಮನೆ ಕುಳಿತುಕೊಳ್ಳದೆ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಮತದಾರರು ನಮ್ಮ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಕನಸಿನ ಮಾತು. ಅದರಲ್ಲೂ ಶಿರಹಟ್ಟಿ ತಾಲೂಕಿನ ಮತದಾರರ ನಾಡಿ ಮಿಡಿತವನ್ನು ನಾನು ಚೆನ್ನಾಗಿ ಬಲ್ಲೆ. ತಾಲೂಕಿನ ಜನ ಎಂದೂ ನನ್ನ ಕೈಬಿಟ್ಟಿಲ್ಲ. ಈ ಬಾರಿ ನಮ್ಮ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರಿಗೆ ಗೆಲವು ನಿಶ್ಚಿತ ಎಂದರು.
ಬಿಎಸ್‌ಆರ್ ಕಾಂಗ್ರೆಸ್‌ನ ಹಿರಿಯ ಧುರೀಣ ಸಣ್ಣೀರಪ್ಪ ಹಳ್ಳೆಪ್ಪನವರ ಮಾತನಾಡಿ, ಸಾಮಾನ್ಯ ಜನರ ಸೇವೆ ಮಾಡಲು ರಾಜಕೀಯದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಕ್ಷೇತ್ರದ ಜನರ ಸೇವೆ ಮಾಡಲು ನಾನು ಕಂಕಣ ಬದ್ಧನಾಗಿದ್ದೇನೆ. ಪುರಸಭೆಯ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಧೈರ್ಯಗೆಡುವ ಅಗತ್ಯವಿಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಬಿಎಸ್‌ಆರ್ ಪಕ್ಷವನ್ನು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರ ಮಾರ್ಗದರ್ಶನದಲ್ಲಿ ಬಲ ಪಡಿಸೋಣ ಎಂದರು.
ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೆದ, ಸೋಮಣ್ಣ ಡಾಣಗಲ್, ಈರಣ್ಣ ಹತ್ತಿಕಾಳ, ನಾನಾಸಾಹೇಬ ಬಹದ್ದೂರದೇಸಾಯಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ, ನಾಜಿಲ್ ಮುಳಗುಂದ, ಸಣ್ಣಿರಪ್ಪ ಕುಂಬಾರ, ಶಂಕರ ಗೋಡಿ, ಶಂಕ್ರಣ್ಣ ಗೊರವರ, ಹನುಮಂತಪ್ಪ ತಳವಾರ, ಮುತ್ತಣ್ಣ ದೇಶಮುಖ, ಗಂಗಮ್ಮ ಫಕ್ಕಿರಸ್ವಾಮಿಮಠ, ಎಂ.ಆರ್.ಪಾಟೀಲ, ಅನಿಲ ಮುಳಗುಂದ, ಗುರು ಮೆಡ್ಲೇರಿ, ನಾಗೇಶ ಅಮರಾಪುರ ಮುಂತಾದವರು ಉಪಸ್ಥಿತರಿದ್ದರು. ಮುದ್ದಣ್ಣ ಸಾಲ್ಮನಿ ಸ್ವಾಗತಿಸಿದರು. ಶಿವಾನಂದ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಮೋಹನ ನರಗುಂದ ವಂದಿಸಿದರು.