ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶ್ರೀರಾಮುಲು ಬಂಧನ: ಬಿಎಸ್ಸಾರ್ ಪ್ರತಿಭಟನೆ

Mainashree
Updated On : 24 Mar 2013, 11:16 am

ಕನ್ನಡಪ್ರಭ ವಾರ್ತೆ, ಗದಗ, ಮಾ. 23
ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಗಳು ಬಂಧಿಸಿರುವ ಕ್ರಮ ವಿರೋಧಿಸಿ ಶನಿವಾರ ಪಕ್ಷದ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಮುಖಂಡ ಎಸ್.ಎಚ್. ಶಿವನಗೌಡರ ಮಾತನಾಡಿ, ಶನಿವಾರ ಬಳ್ಳಾರಿಯ ಬೀದಿ ಬೀದಿ ವ್ಯಾಪಾರಿಗಳ ತೆರವು ವಿರೋಧಿಸಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಬಳ್ಳಾರಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ರಾಯಲ್ ವೃತ್ತದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಶ್ರೀರಾಮುಲು ಅವರ ಬಟ್ಟೆ ಹರಿದು ಎಳೆದಾಡಿ ಬಂಧನ ಮಾಡಿರುವ ಕ್ರಮ ಖಂಡನಾರ್ಹ ಎಂದರು.
ಪ್ರಜಾಪ್ರಭುತ್ವದಲ್ಲಿ ತಪ್ಪುಗಳು ಕಂಡುಬಂದಾಗ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ, ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ವಿಪಕ್ಷ ನಾಯಕರಂತೆ, ಕಾಂಗ್ರೆಸ್ ಪ್ರತಿನಿಧಿಯಂತೆ ಮತ್ತು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ವಿಧಾನಸಭಾ ಚುನಾವಣೆ ಸುಸೂತ್ರವಾಗಿ ನಡೆಯಬೇಕೆಂದರೆ ಅವರನ್ನು ತಕ್ಷಣ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಬಡವರ ಪರ ಧ್ವನಿ ಎತ್ತಿದವರ ಮೇಲೆ ದೌರ್ಜನ್ಯ ಮಾಡುವುದು, ಚುನಾವಣೆ ವೇಳೆ ಜನರನ್ನು ಭಯ ಬೀಳಿಸುವ ಹುನ್ನಾರ ನಡೆಯುವುದನ್ನು ತಡೆಯಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಬಿಎಸ್ಸಾರ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸುಭಾಶ್ಚಂದ್ರ ದಾನರಡ್ಡಿ, ಬಸವಣ್ಣೆಯ್ಯ ಹಿರೇಮಠ, ಎಂ.ಎಚ್. ಮುಳಗುಂದ, ಮೌಲಾಸಾಬ ಮಾನ್ವಿ, ಅಂಬರೀಶ ಹಿರೇಮಠ, ಮಂಜು ಮ್ಯಾಗೇರಿ, ವೆಂಕಟೇಶ ದಾಸರ, ರವೀಂದ್ರ ಲಕ್ಕುಂಡಿ, ಮಂಜುನಾಥ ಮುಳಗುಂದ, ಸಂತೋಷ ಮೇಲಗಿರಿ, ನಾಗಲಿಂಗ ಐಲಿ, ಬಾಬಾಜಾನ ಬಳಗಾನೂರ, ಸಾಧಿಕ ಮನಿಯಾರ, ರಮೇಶ ಅರಹುನಸಿ, ಶಿವಾನಂದ ಚೌಡಕಿ, ಉಮಾದೇವಿ ಬಿರನೂರ, ಜಯಶ್ರೀ ಅಣ್ಣಿಗೇರಿ, ಚನ್ನಮ್ಮಾ ಹುಳಕಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement