ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಸ್ಯೆಗೆ ಸ್ಪಂದಿಸದ ಮುಖ್ಯಾಧಿಕಾರಿ ತರಾಟೆಗೆ

Mainashree
Updated On : 24 Mar 2013, 11:19 am

ಕನ್ನಡಪ್ರಭ ವಾರ್ತೆ, ರೋಣ, ಮಾ. 23
ಪಟ್ಟಣದ 5, 6, 10, 11 ಮತ್ತು 23ನೇ ವಾರ್ಡ್‌ಗಳಲ್ಲಿನ ಜನತೆ ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದು, ಗಟಾರು, ಉತ್ತಮ ರಸ್ತೆ, ಸರಿಯಾದ ಸಮಯಕ್ಕೆ ಕುಡಿವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಈ ಹಿಂದೆ ಹಲವಾರು ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶಗೊಂಡ ಸಾರ್ವಜನಿಕರು, ಶನಿವಾರ ಪುರಸಭೆ ಮುಖ್ಯಾಧಿಕಾರಿಯನ್ನು ನೂತನ ಸದಸ್ಯರೇ ತೀವ್ರ ತರಾಟೆಗೆ ತಗೆದುಕೊಂಡ ಘಟನೆ ಜರುಗಿತು.
ಲಿಖಿತ ಮನವಿ ಸಲ್ಲಿಸಿದ್ದ 10ನೇ ವಾರ್ಡಿನ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, 10ನೇ ವಾರ್ಡಿನಲ್ಲಿ 10 ದಿನಗಳಿಗೊಮ್ಮೆ ನೀರು ಬರುತ್ತದೆ. ಅಲ್ಲಲ್ಲಿ ಪೈಪ್ ಒಡೆದಿದ್ದು, ನೀರು ಸೋರಿಕೆಯಾಗುತ್ತಿದೆ. ಜನತೆ ಮತ್ತು ಜಾನುವಾರುಗಳು ನೀರಿಲ್ಲದೆ ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಹೇಳಿದರು.
ಎರಡು ಮಹಿಳಾ ಶೌಚಾಲಯ ನಿರ್ಮಾಣವಾಗಿ ಒಂದು ವರ್ಷವಾಗಿದೆ. ಈ ವರೆಗೂ ಬಳಕೆಗೆ ಕೊಟ್ಟಿಲ್ಲ. ಇದರಿಂದ ಮಹಿಳೆಯರು ಬಹಿರ್ದೆಸೆಗೆ ಹೋಗಲು ತೊಂದರೆಯಾಗುತ್ತಿದೆ. ಗಟಾರುಗಳು ನಿರ್ಮಾಣವಾದಾಗಿನಿಂದ ಈವರೆಗೂ ಸ್ವಚ್ಛಗೊಳಿಸಿಲ್ಲ. ಸೊಳ್ಳೆಗಳ ಕಾಟ ಹೆಚ್ಚಿದೆ. ಜನತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದು, ವಾಸಿಸಲು ಭಯ ಪಡುತ್ತಿದ್ದಾರೆಂದು ದೂರಿದರು.    
ಗಮನಹರಿಸದ ಮುಖ್ಯಾಧಿಕಾರಿ: ವಾರ್ಡಿನ ಜನತೆ ನಿತ್ಯ ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ನೀರು, ರಸ್ತೆ, ಗಟಾರು ಮತ್ತು ಶೌಚಾಲಯ ಸೌಲಭ್ಯಗಳಿಗಾಗಿ ಪುರಸಭೆಗೆ ಬಂದು ಲಿಖಿತ ಮನವಿ ಸಲ್ಲಿಸಿದರೂ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಅವರು ಅಭಿವೃದ್ಧಿ ಮತ್ತು ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುತ್ತಿಲ್ಲ. ಕೇವಲ ಹಾರಿಕೆ ಉತ್ತರದಿಂದ ಸಮಜಾಯಿಸಿ ನೀಡುತ್ತಾರೆ. ಇಂತಹ ಮುಖ್ಯಾಧಿಕಾರಿ ರೋಣ ಪುರಸಭೆಗೆ ಬೇಡ. ಇವರಿಂದ ನಿರೀಕ್ಷಿತ ಅಭಿವೃದ್ಧಿಯಾಗುವುದರ ಬದಲು ಸಮಸ್ಯೆಗಳೇ ಹೆಚ್ಚಾಗುತ್ತಿವೆ. ಇದರಿಂದ ಪಟ್ಟಣದ ಜನತೆಯ ಬದುಕು ದುಸ್ತರವಾಗಿದೆ ಎಂದು ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿಯವರು ಮುಖ್ಯಾಧಿಕಾರಿಗಳ ಮೇಲೆ ಯೋಗ್ಯ ಕ್ರಮ ಜರುಗಿಸಬೇಕು ಎಂದು ಸದಸ್ಯರಾದ ಬಸನಗೌಡ ಪಾಟೀಲ, ಮಂಜುನಾಥ ಹಾಳಕೇರಿ, ಖಾದಿರಸಾಬ ಸಂಕನೂರ, ಶರಣವ್ವ ಜಿಡ್ಡಿಬಾಗಿಲ ಆಗ್ರಹಿಸಿದರು.
ವಾರ್ಡ್‌ಗಳಲ್ಲಿ ಜನತೆ ಸಮಸ್ಯೆ ಆಲಿಸುತ್ತಿದ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಹಾಗೂ ಪುರಸಭೆ ಸಿಬ್ಬಂದಿಗೆ ಅಲ್ಲಿನ ಜನತೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಸತ್ತಿದ್ದಾರೊ.... ಇಲ್ಲ ಬದುಕಿದ್ದಾರೊ ಎಂಬುದನ್ನು ನೋಡಲು ಬಂದಿದ್ದೀರಾ..ಗಟಾರು ತುಂಬಿ ಸೊಳ್ಳೆಗಳು ಹೆಚ್ಚಾಗಿವೆ. ಮನೆಯಲ್ಲಿ ಕುಳಿತುಕೊಳ್ಳಲು, ಊಟ ಮಾಡಲು ಆಗುತ್ತಿಲ್ಲ. ಮೂಗು ಮುಚ್ಚಿಕೊಂಡು ಜೀವಿಸಬೇಕಾಗಿದೆ.
ಒಂದು ವರ್ಷದಿಂದ ಗಟಾರು ಸ್ವಚ್ಛಗೊಳಿಸಿಲ್ಲ. ತುಂಬಿದ ಗಟಾರುಗಳಲ್ಲಿ ಸಣ್ಣ ಮಕ್ಕಳು ಅನೇಕ ಬಾರಿ ಬಿದ್ದಿವೆ. ಕೂಡಲೇ ಸಮಸ್ಯೆಗಳಿಗೆ ಮುಕ್ತಿ ಹಾಡಿ ಎಂದು ಸಂಗಪ್ಪ ಜಿಡ್ಡಿ ಬಾಗಿಲ, ಶಾವಂತ್ರವ್ವ ಗಂಟಿಮಠ, ಬಾಲಾಸಾಬ ಕುರಹಟ್ಟಿ, ಶಾಂತಾಬಾಯಿ ಮಾರಾನಬಸರಿ, ಯಲ್ಲಪ್ಪ ಜೋಗಣ್ಣವರ, ಗದಿಗೆಪ್ಪ ಜೋಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡಿನ ಜನತೆ ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ನೀರು, ರಸ್ತೆ, ಗಟಾರು ಮತ್ತು ಶೌಚಾಲಯ ಸೌಲಭ್ಯಗಳಿಗಾಗಿ ಪುರಸಭೆಗೆ ಬಂದು ಲಿಖಿತ ಮನವಿ ಸಲ್ಲಿಸಿದರೂ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಅವರು ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುತ್ತಿಲ್ಲ. ಇಂತಹ ಮುಖ್ಯಾಧಿಕಾರಿ ರೋಣ ಪುರಸಭೆಗೆ ಬೇಡ.
 -ಸಾರ್ವಜನಿಕರು.
ಪಟ್ಟಣದ 10 ಮತ್ತು 11ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಹಾಗೂ ಮಹಿಳಾ ಶೌಚಾಲಯದ ಸಮಸ್ಯೆಯಿದೆ. ಕೂಡಲೇ ಪರಿಹರಿಸಲಾಗುವುದು. ಗಲೀಜು ತುಂಬಿರುವ ಗಟಾರುಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಂಪರ್ಕ ವಿಳಂಭವಾದ್ದರಿಂದ ಮಹಿಳಾ ಶೌಚಾಲಯ ಬಳಕೆಗೆ ನೀಡಲು ವಿಳಂಬವಾಗಿದೆ.
 ವಿ. ರಾಮಸ್ವಾಮಿ, ರೋಣ ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement