ಆರ್ಥಿಕವಾಗಿ ಸಬಲರಾಗಿ: ಗಿರೀಶ್ ಪಾಟೀಲ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 24
ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಲು ಹಲವಾರು ಅವಕಾಶಗಳಿವೆ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಮುನ್ನಡೆದಾಗ ಮಾತ್ರ ಮಹಿಳಾ ದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಶಾಖಾಧಿಕಾರಿ ಗಿರೀಶ ಪಾಟೀಲ ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಿಂದ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಕಾಸ ಮಹಿಳಾ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ದೃಢ ಸಂಕಲ್ಪ, ವಿಶಾಲ ಮನೋಭಾವನೆಗಳಿಂದ ವಿಶ್ವದಲ್ಲಿ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪುರುಷರಿಗೆ ಸರಿಸಮಾನರಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಶಕ್ತಿಯನ್ನು ರೂಢಿಸಿಕೊಂಡು ಮಹಿಳೆಯರು ಪ್ರಗತಿ ಸಾಧಿಸಬೇಕು. ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್, ಸ್ಪ-ಸಹಾಯ ಗುಂಪು ಸಾಲ, ಜಂಟಿ ಜವಾಬ್ದಾರಿ ಹಾಗೂ ಗುಂಪಿನ ಸಾಲಗಳಂತಹ ಸೌಲಭ್ಯ ನೀಡುತ್ತಿದ್ದು, ಸಾಲ ಪಡೆದು, ಸಕಾಲಕ್ಕೆ ಪಾವತಿಸಿ ಯೋಜನೆ ಸದ್ಬಳಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಗೀತಾ ಕುಲಕರ್ಣಿ ಮಹಿಳಾ ಸಬಲೀಕರಣ ಕುರಿತು ಮಾತನಾಡಿದರು. ಗ್ರಾಮದ 4 ಮಹಿಳಾ ಸ್ವಸಹಾಯ ಗುಂಪು ಸೇರಿ 22 ಫಲಾನುಭವಿಗಳಿಗೆ ಸಾಲ ವಿತರಿಸಲಾಯಿತು. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ.ಬಿ. ಹಳ್ಳದ, ಕೆವಿಜಿ ಬ್ಯಾಂಕಿನ ಪಿ.ಬಿ. ಜೋಶಿ, ರೇಣುಕಾ ಪಾಟೀಲ ಉಪಸ್ಥಿತರಿದ್ದರು.