ಕಾರ್ಯಕರ್ತರಿಗೆ ಎಲ್ಲಿಲ್ಲದ ಬೇಡಿಕೆ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 24
ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಪಕ್ಷದ ನಾಯಕರೇ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗಿ ಅವರನ್ನು ಸಂತೈಸಿ, ಮತ್ತೊಂದು ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ. ಸ್ಥಳೀಯ ಚುನಾವಣೆಗಿಂತ ಹೆಚ್ಚಿನ ಕಾರ್ಯಕರ್ತರ ಅವಶ್ಯಕತೆ ಈ ಚುನಾವಣೆಯಲ್ಲಿ ಎದುರಾಗುವುದರಿಂದ ಪಕ್ಷದ ನಾಯಕರಿಗೆ ತಲೆ ಬಿಸಿಯಾಗಿದೆ.
ಈ ಹಿಂದೆ ಕಾರ್ಯಕರ್ತರು ನಾಯಕರನ್ನು ಭೇಟಿ ಮಾಡಲು ತಡಕಾಡುತ್ತಿದ್ದರು, ಇದಕ್ಕೆ ಪಕ್ಷದ ನಾಯಕರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದವು. ಆದರೆ, ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಳು ಒಂದರ ಹಿಂದೆ ಮತ್ತೊಂದು ಎದುರಾಗಿರುವುರಿಂದ ಸಹಜವಾಗಿ ಕಾರ್ಯಕರ್ತರ ಬೆಲೆ ಪಕ್ಷದ ನಾಯಕರಿಗೀಗ ಗೋಚರವಾಗಿದ್ದು, ಅವರನ್ನು ದುಂಬಾಲು ಬಿದ್ದು ಮತ್ತೆ ಚುನಾವಣೆಗೆ ಅಣಿಗೊಳಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಸದ್ಯ ಜಿಲ್ಲೆಯಾದ್ಯಂತ ಕಾರ್ಯಕರ್ತರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ದಿನವೂ ವಿಶೇಷ
ಈಗಾಗಲೇ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಪಕ್ಷದ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ರೂಢಿಸಿಕೊಂಡಿರುವುದು, ಬಾಡೂಟ ಮಾಡಿಸುವುದು. ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿಗಳ ಮನೆಗಳ ಸಮೀಪದಲ್ಲಿ, ತೋಟದ ಮನೆಗಳಲ್ಲಿ, ಜಿಲ್ಲೆಯ ವಿವಿಧ ಡಾಬಾಗಳಲ್ಲಿ ಕಾರ್ಯಕರ್ತರಿಗೆ ಗುಂಡು, ತುಂಡಿನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಪ್ರತಿ ದಿನ ಕಾರ್ಯಕರ್ತರನ್ನು ಊಟಕ್ಕಾಗಿ ಕರೆದುಕೊಂಡು ಹೋಗಲು ಪ್ರತ್ಯೇಕ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಕಾರ್ಯಕರ್ತರನ್ನು ಮೇ 5ರ ವರೆಗೆ ಹಿಡಿದಿಟ್ಟುಕೊಳ್ಳಲು ಈ ರೀತಿಯ ಹಾದಿ ಹಿಡಿರುವುದು, ಕೆಲ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ.
ನೈಜ ಕಾರ್ಯಕರ್ತರ ಬೇಸರ
ಚುನಾವಣೆಗೆ ಬಂದಾಗ ಮಾತ್ರ ಕಾರ್ಯಕರ್ತರನ್ನು ನೆನಪಿಸಿಕೊಳ್ಳುವ ಸ್ಥಿತಿ ಪಕ್ಷಗಳ ನಾಯಕರಲ್ಲಿ ಬಂದಿದೆ.
ಒಂದರ ಮೇಲೊಂದರಂತೆ ಚುನಾವಣೆಗಳು ಎದುರಾದ ತಕ್ಷಣ ಕಾರ್ಯಕರ್ತರಿಗೆ ಎಲ್ಲಿಲ್ಲದ ಕಾಳಜಿ ತೋರಿಸುವ ನಾಯಕರು, ದಿನವೂ ಬಾಡೂಟ ಹಾಗೂ ಗುಂಡಿನ ವ್ಯವಸ್ಥೆ ಮಾಡಿದಲ್ಲಿ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಾರೆ ಎನ್ನುವ ಭ್ರಮಾ ಲೋಕದಲ್ಲಿ ತೇಲುತ್ತಿದ್ದಾರೆ. ಪಕ್ಷದಲ್ಲಿ ಇದಕ್ಕಾಗಿಯೇ ಕೆಲಸ ಮಾಡುವ ಒಂದು ವರ್ಗದ ಕಾರ್ಯಕರ್ತರಿರುತ್ತಾರೆ. ಆದರೆ, ಎಲ್ಲಾ ಕಾರ್ಯಕರ್ತರನ್ನು ಅದೇ ದೃಷ್ಟಿಕೋನದಿಂದ ನಾಯಕರು ನೋಡುತ್ತಿದ್ದು, ಇದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಎಲ್ಲೆಲ್ಲಿ ಊಟ...
ಕಾರ್ಯಕರ್ತರಿಗಾಗಿ ವಿವಿಧ ರಾಜಕೀಯ ಪಕ್ಷಗಳು ಜಿಲ್ಲೆಯ ಗದಗ-ಕೊಪ್ಪಳ, ಗದಗ-ಹುಬ್ಬಳ್ಳಿ, ರೋಣ-ಗಜೇಂದ್ರಗಡ, ಗದಗ-ರೋಣ, ನರಗುಂದ-ನವಲಗುಂದ ಹೆದ್ದಾರಿ ಪಕ್ಕದಲ್ಲಿರುವ ಪ್ರತಿ ಡಾಬಾಗಳಲ್ಲಿಯೂ ವ್ಯವಸ್ಥೆ ಕಲ್ಪಿಸಿದ್ದಾರೆ. ಒಂದೊಂದು ಡಾಬಾಗಳು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿದ್ದರೆ, ಇನ್ನು ಕೆಲ ಡಾಬಾಗಳಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗಾಗಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಡಾಬಾದ ಮಾಲೀಕನೋರ್ವ ಕನ್ನಡಪ್ರಭಕ್ಕೆ ಖಚಿತ ಪಡಿಸಿದ. ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಇದರ ಪ್ರಭಾವ ಇನ್ನು ಅಷ್ಟಾಗಿ ಕಂಡು ಬರುತ್ತಿಲ್ಲ. ಆದರೆ, ಪಕ್ಷದ ನಾಯಕರ ತೋಟದ ಮನೆಗಳಲ್ಲಿಯೇ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.