ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಾತ್ರೆ ಭಾವೈಕ್ಯದ ಕುರುಹು

Rashmi Kasaragodu
Updated On : 25 Mar 2013, 10:43 am

ಕನ್ನಡಪ್ರಭ ವಾರ್ತೆ, ಗದಗ, ಮಾ. 24
ಜಾತ್ರೆ ನೆಪದಲ್ಲಿ ಎಳೆಯುವ ತೇರು ಸರ್ವ ಜನರ ಭಾವೈಕ್ಯದ ಕುರುಹು. ಜಾತ್ರೆಯು ವಿವಿಧ ಸಮುದಾಯದ ಭಕ್ತರ ಕತೃತ್ವ ಶಕ್ತಿ, ಸಂಘಟನೆಯ ಸಂಕೇತವಾಗಿದೆ. ಜಾತ್ರಾ ಮಹೋತ್ಸವದಲ್ಲಿ ಭಕ್ತರೇ ಪ್ರಧಾನ ಎಂದು ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ 2111ನೇ ಶಿವಾನುಭವದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಜಾತ್ರೆಗಳು ಸಾಂಸ್ಕೃತಿಕ ಹರವು ವಿಸ್ತರಿಸಿ, ಆಚಾರಗಳ ಬಗ್ಗೆ ತಿಳಿವಳಿಕೆ ಪಡೆಯುವ ಸಾಧನವಾಗಿದೆ. ಜಾತ್ರೆಗಳು ಇತ್ತೀಚೆಗೆ ಹೊಸ ವೈಚಾರಿಕ ರೂಪ ಪಡೆಯುತ್ತಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ತೋಂಟದಾರ್ಯ ಮಠದ ಜಾತ್ರೆ ನಡೆದು ಬಂದ ದಾರಿ ವಿಹಂಗಮವಾಗಿದೆ. ಕೇವಲ ತೇರು, ಉತ್ತತ್ತಿ, ಫಳಾರಕ್ಕೆ ಸೀಮಿತಗೊಳಿಸದೆ ಧರ್ಮ, ಸಮಾಜ, ಸಂಸ್ಕೃತಿ ಕುರಿತಾದ ಕಳಕಳಿಯ ಕಾರ್ಯಸಾಧನೆಯಾಗಿ ಜಾತ್ರೆ ಪರಿವರ್ತನೆಗೊಳ್ಳುವಲ್ಲಿ ಮಠದ ಭಕ್ತರ ಪಾತ್ರವೇ ಪ್ರಮುಖವಾಗಿದೆ ಎಂದರು.
ನಿವೃತ್ತ ಪ್ರಾ. ಕೆ.ಎಚ್. ಬೇಲೂರ ಉಪನ್ಯಾಸ ನೀಡಿದರು. ಅನಂತರ ದೀಪಾ ಬೇವಿನಮರದ, ವಿಜೇತಾ ಜಂಗಣ್ಣವರಿಂದ ಧರ್ಮಗ್ರಂಥ ಪಠಣ ಹಾಗೂ ಚಿಂತನೆ ನಡೆಯಿತು. ಜಾತ್ರಾ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್, ಕೂಡ್ಲಿಗಿಯ ಭರಮಣ್ಣ, ಹಗರಿಬೊಮ್ಮನಹಳ್ಳಿಯ ಸಿ.ಸಿ. ಮೂರ್ತಿ, ನಾಗನಗೌಡ, ಎಂ.ಬಿ. ಹಳ್ಳಿ ಇತರರನ್ನು ಶ್ರೀಗಳು ಆಶೀರ್ವದಿಸಿದರು.
ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಅನ್ನಕ್ಕ ಬೇವಿನಮರದ, ಖಜಾಂಚಿ ಸಿದ್ದಲಿಂಗೇಶ ಹಿರೇಮಠ, ಸಹಕಾರ್ಯದರ್ಶಿ ವೀರೇಶ ಮುನವಳ್ಳಿ, ಶಿವಾನುಭವ ಸಮಿತಿ ಚೇರ್‌ಮನ್ ತೊಂಟೇಶ ಕುರಡಗಿ ಮುಂತಾದವರು ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement