ನೀತಿ ಸಂಹಿತೆ ಉಲ್ಲಂಘನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 24
ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಪ್ರಕಟಿಸಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದರೂ ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಎಸ್.ಎಂ. ಆರಗಿದ್ದಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಶನಿವಾರ ಪ್ರಭಾರಿ ಮುಖ್ಯಾಧಿಕಾರಿ ಸಿ.ಕೆ. ಕುಲಕರ್ಣಿಯವರ ಮೂಲಕ ಜಿಲ್ಲಾ ಚುನಾವಣಾ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದರು.
ಮಂಜೂರಾತಿ ಪತ್ರ ವಿತರಿಸಿ ಉಲ್ಲಂಘನೆ
ಎಸ್.ಎಂ. ಆರಗಿದ್ದಿ ಮಾತನಾಡಿ, ಸಚಿವ ಕಳಕಪ್ಪ ಬಂಡಿಯವರ ಒತ್ತಾಯಕ್ಕೆ ಮಣಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿಯವರು ಸರ್ಕಾರದ ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾದ 1,386 ಫಲಾನುಭವಿಗಳಲ್ಲಿ ಈಗಾಗಲೇ 800 ಜನರಿಗೆ ಮಂಜೂರಾತಿ ಪತ್ರವನ್ನು ಸಿಬ್ಬಂದಿ ಮೂಲಕ ಮನೆ ಮನೆಗೆ ತೆರಳಿ ವಿತರಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದರು.
ತರಾಟೆ: ನಂತರ ಸ್ಥಳದಲ್ಲಿದ್ದ ಆಶ್ರಯ ನಿರ್ವಹಣಾ ಅಧಿಕಾರಿ ಎಂ.ಬಿ. ಒಂಟಿಯವರನ್ನು ಕಾಂಗ್ರೆಸ್ ಮುಖಂಡರು ವಿಚಾರಿಸಿದಾಗ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿಯವರ ಆದೇಶ ಮೇರೆಗೆ 4 ತಂಡಗಳಾಗಿ ಮನೆ ಮನೆಗೆ ತೆರಳಿ ವಾಜಪೇಯಿ ವಸತಿ ಯೋಜನೆಯ ಕಾಮಗಾರಿ ಮಂಜೂರಾತಿ ಪತ್ರ ವಿತರಿಸಿದ್ದೇವೆ ಎಂದು ಒಪ್ಪಿಕೊಂಡರು. ಅಧಿಕಾರಿಗಳ ಹೇಳಿಕೆ ಮುಖಂಡರನ್ನು ಕೆರಳುವಂತೆ ಮಾಡಿತು. ನೌಕರಿ ಮಾಡುತ್ತಿರೋ ರಾಜಕೀಯ ಮಾಡುತ್ತಿರೋ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ಸಚಿವ ಕಳಕಪ್ಪ ಬಂಡಿಯವರು ಅಧಿಕಾರಿಗಳ ಮೂಲಕ ಚುನಾವಣಾ ನಿಯಮಾವಳಿ ಗಾಳಿಗೆ ತೂರಿ ಮತದಾರ ಪಟ್ಟಿಯಲ್ಲಿ ಅಕ್ರಮ ನುಸುಳುಕೊರರನ್ನು ಸೇರ್ಪಡೆಗೊಳಿಸುವ ಯತ್ನ ನಡೆಸಿದ್ದಾರೆ. ಅಲ್ಲದೇ ಮತದಾರರಿಗೆ ಆಮಿಷದ ಹೊಳೆ ಹರಿಸಿ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಪ್ರಭಾರ ಮುಖ್ಯಾಧಿಕಾರಿ ಸಿ.ಕೆ. ಕುಲಕರ್ಣಿ ಆದ ಪ್ರಮಾದ ಬಗ್ಗೆ ಕ್ಷಮೆಯಾಚಿಸುವುದಾಗಿ ಹೇಳಿದರು. ಈ ಕ್ಷಣದಿಂದಲೇ ಕಾಮಗಾರಿ ಆದೇಶ ಪತ್ರ ವಿತರಿಸುವುದನ್ನು ನಿಲ್ಲಿಸುತ್ತೇವೆ ಎಂದರು. ಅಪ್ಪು ಮತ್ತಿಕಟ್ಟಿ, ಉಮೇಶ ರಾಠೋಡ, ಪಾಂಡುರಂಗ ಶಿಲವೇರಿ, ಯಂಕಣ್ಣ ಸೊನ್ನದ, ಮುತ್ತಣ್ಣ ಲಕ್ಕಲಕಟ್ಟಿ, ನಾಸೀರ ಸುರಪುರ, ಬಿ.ಎ. ನದಾಫ್, ದಾದೇಸಾಬ ಹಣಗಿ, ವಿ.ವಿ. ಪಟ್ಟಣಶೆಟ್ಟಿ, ಇತರರು ಉಪಸ್ಥಿತರಿದ್ದರು.