ಪ್ರವಚನಗಳಿಂದ ಸನ್ಮಾರ್ಗ: ಮಾಳೆಕೊಪ್ಪಮಠ
ಗದಗ: ದೇವಸ್ಥಾನ, ಮಠ, ಮಂದಿರಗಳಲ್ಲಿ ಜರುಗುವ ಭಜನೆ, ಪ್ರಾರ್ಥನೆ, ಪುರಾಣ ಪ್ರವಚನಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸಿ ಮನುಷ್ಯ ಸನ್ಮಾರ್ಗಿಯಾಗಲು ಸಾಧ್ಯ ಎಂದು ವಿ.ಆರ್. ಮಾಳೆಕೊಪ್ಪಮಠ ಹೇಳಿದರು.
ರೇಣುಕ ನಗರದ ಜ. ರೇಣುಕಾಚಾರ್ಯ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವ ನಿಮಿತ್ತ ಆಯೋಜಿಸಿರುವ ರೇಣುಕ ವಿಜಯ ಮಹಾಪುರಾಣ ಪ್ರಾರಂಭೋತ್ಸವ ಉದ್ಘಾಟಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪುರಾಣ, ಪ್ರವಚನಗಳಲ್ಲಿ ಪಾಲ್ಗೊಂದು ಧಾರ್ಮಿಕತೆ ಹಾಗೂ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೈಸೂರ ಅರಮನೆ ಜಪದಕಟ್ಟಿಮಠ ಹಾಗೂ ಬೃಹನ್ಮಠದ ಡಾ ಸುಜ್ಞಾನದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಜಿಲ್ಲಾಧಿಕಾರಿ ಎ.ಎಂ. ಗೌಡರ, ಅಮರಪ್ಪ ಶಿವನಗುತ್ತಿ ಮತ್ತಿತರರು ಇದ್ದರು.