ಮಕ್ಕಳ ಬಗ್ಗೆ ಪಾಲಕರು ಕಾಳಜಿ ತೆಗೆದುಕೊಳ್ಳಬೇಕು
ಗದಗ: ಮಕ್ಕಳ ಮನಸ್ಸು ತುಂಬಾ ಮೃದುವಾಗಿದ್ದು, ಪಾಲಕರಾದವರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಅವರ ಜೀವನವನ್ನು ರೂಪಿಸುವಲ್ಲಿ ಶ್ರಮಿಸಬೇಕಾಗಿದೆ ಎಂದು ಹಿರಿಯ ನ್ಯಾಯವಾದಿ ಎಸ್.ಕೆ. ಮೇಟಿ ಹೇಳಿದರು.
ಈಚೆಗೆ ಅವರು ಸ್ಥಳೀಯ ನೇತಾಜಿ ಸುಭಾಷಚಂದ್ರ ಭೋಸ್ ಪೂರ್ವ ಪ್ರಾಥಮಿಕ ಸೈನಿಕ ಕಾನ್ವೆಂಟ್ ಶಾಲೆ, ಜಿ.ಜಿ. ಟ್ಯುಟೋರಿಯಲ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಉದ್ಯೋಗ ಹಾಗೂ ವೃತ್ತಿ ಮಾರ್ಗದರ್ಶಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಾರ್ಷಿಕ ದಿನಾಚರಣೆ, ಪಾಲಕರ ಸಮಾವೇಶ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಡಾ.ಬಿ.ಎಫ್. ದಂಡಿನ, ಮೌಲ್ಯಾಧಾರಿತ ಶಿಕ್ಷಣ ಕುರಿತು ಮಾತನಾಡಿದರು. ಪ್ರಾಥಮಿಕ ಶಾಲಾ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ವಿ.ಬಿ. ಕಾಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭ ಪ್ರೊ. ಎಸ್.ವಿ. ಮತ್ರಿಮಠ, ಪಿ.ಎನ್. ಪೈ, ಎಸ್.ವಿ. ಶಿರೋಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಿ.ಬಿ. ತಾಳಿ ಇದ್ದರು. ವನಮಾಲಾ ಮಾನಶೆಟ್ಟಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಅಂದಾನಪ್ಪ ವಿಭೂತಿ ಸ್ವಾಗತಿಸಿದರು. ಪುಷ್ಪಲತಾ ಹಿರೇಮಠ ನಿರೂಪಿಸಿದರು. ಪ್ರೊ. ಬಿ.ಎಫ್. ಚೇಗರಡ್ಡಿ ವಂದಿಸಿದರು.