ಮಹಾತ್ಮರ ಸಂದೇಶ ಮುಕ್ತಿಗೆ ಸಹಕಾರಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 24
ಮಾನವನು ಮುಕ್ತಿ ಹೊಂದಬೇಕಾದಲ್ಲಿ ಶರಣರ, ಮಹಾತ್ಮರ ಸಂದೇಶಗಳು ಸಹಕಾರಿಯಾಗಲಿವೆ ಎಂದು ಮುಂಡರಗಿಯ ಅನ್ನದಾನೀಶ್ವರ ಮಠದ ನಾಡೋಜ ಜ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಭಾನುವಾರ ಹಾತಲಗೇರಿಯ ಸಾಯಿ ಬಡಾವಣೆಯಲ್ಲಿನ ಸಾಯಿಮಂದಿರದ ಹಿಂಭಾಗದ ಆವರಣದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ಗದಗ-ಬೆಟಗೇರಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಸಾಂಸ್ಕೃತಿಕ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮನುಷ್ಯ ಜನ್ಮವು ಅತಿ ಪ್ರಮುಖವಾದ ಜನ್ಮವಾಗಿದ್ದು, ಜೀವನ ಮುಕ್ತಿ ಹೊಂದಬೇಕಾದರೆ ಸತ್ಸಂಗ, ಶರಣರ ಹಿತನುಡಿಗಳನ್ನು ಕೇಳುವ ಮೂಲಕ ಅವುಗಳನ್ನು ತಮ್ಮ ಅನುಕರಣೆ ಮಾಡಿಕೊಳ್ಳಬೇಕು. ಆದರೆ ಇಂದು ಈ ಪದ್ಧತಿ ಅನುಕರಣೆಯಾಗದೇ ಇರುವುದು ನೋವಿನ ಸಂಗತಿಯಾಗಿದೆ. ಇಂದು ಬಹುತೇಕ ಜನರು ತಮ್ಮ ಮಕ್ಕಳನ್ನು ಹೆಚ್ಚಿನ ಶಿಕ್ಷಣ ನೀಡುವ ಸಲುವಾಗಿ ಧಾರ್ಮಿಕತೆ, ಆಧ್ಯಾತ್ಮಿಕತೆಯಲ್ಲಿ ತೊಡಗಿಸದೇ ಇರುವುದರಿಂದ ಇಂದಿನ ಮಕ್ಕಳು ಧಾರ್ಮಿಕತೆಯಲ್ಲಿ ತೊಡಗದೇ ಹಲವು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು, ಜನರಿಗೆ ಮೋಸ, ವಂಚನೆ, ದ್ರೋಹವನ್ನು ಎಸಗದೇ ಎಲ್ಲರಿಗೂ ಒಳಿತನ್ನು ಮಾಡುವ ಮೂಲಕ ಇತರರಿಗೆ ಮಾದರಿ ಜೀವನವನ್ನು ನಡೆಸಬೇಕಾಗಿದೆ. ಅಂದಾಗ ಮನುಷ್ಯ ಪುನರ್ ಜನ್ಮ ಪಡೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಜನರಲ್ಲಿ ಧರ್ಮಜಾಗೃತಿ ಮೂಡಿಸಲು ಸಹಕಾರಿಯಾಗಿದ್ದು, ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೀವನ ಪಾವನಗೊಳಿಸುವಂತೆ ಕೋರಿದರು.
ಪ್ರವಚನಕಾರರಾಗಿ ಆಗಮಿಸಿದ್ದ ಬಾಗಲಕೋಟೆಯ ಪ್ರದೀಪ ಗುರೂಜಿ ಮಾತನಾಡಿ, 84 ಕೋಟಿ ಜೀವರಾಶಿಗಳಲ್ಲಿ ಮನುಷ್ಯ ಜಾತಿ ಅತ್ಯಂತ ಪ್ರಮುಖವಾಗಿದ್ದು, ಮಾನವನು ಒಳ್ಳೆಯ ಚಾರಿತ್ರ್ಯ ಉಳ್ಳವನಾಗಲು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀಗಳು ಆಶೀರ್ವಚನನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಅಶೋಕ ಜಾಧವ, ಮಂಡಳಿಯ ಉಪಾಧ್ಯಕ್ಷ ಕೆ.ವಿ. ಜೋಶಿ, ಎಸ್.ಎ. ಮೊರಬದ, ಐ.ಕೆ. ಬಲೂಚಗಿ, ಕೆ.ನಾಗೇಶರಾವ್, ದುಂಡಪ್ಪ ಮಲ್ಲಾಡದ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಎಸ್.ಡಿ.ಯರಗೇರಿ, ಶಿವಯ್ಯ ಹಿರೇಮಠ, ಮಹೇಶಗೌಡ ತೇಲಿಗೌಡ್ರ, ಉಮೇಶ ನಾಲವಾಡ, ದೀಪಕ ಸುಲಾಖೆ, ಶ್ರೀಶೈಲ ಕುರ್ತಕೋಟಿ ಉಪಸ್ಥಿತರಿದ್ದರು. ನಿರಜ ಶೆಟ್ಟರ ಪ್ರಾರ್ಥಿಸಿದರು. ನಳನಾ ಹಿರೇಮಠ ಸ್ವಾಗತಿಸಿದರು. ರವಿಕುಮಾರ ಚಿಂಚಲಿ ಕಾರ್ಯಕ್ರಮ ನಿರೂಪಿಸಿದರು.