ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜಕೀಯ ಶಕ್ತಿಯಾಗಿ ಬೆಳೆಯಿರಿ

Rashmi Kasaragodu
Updated On : 25 Mar 2013, 10:39 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 24
ರಾಜ್ಯದಲ್ಲಿ ಇತರ ಸಮಾಜದವರು ಹಾಗೂ ಮಠಾಧೀಶರು ತಮ್ಮ ರಾಜಕೀಯ ಶಕ್ತಿ ಪ್ರದರ್ಶನದಿಂದ ಸರ್ಕಾರವನ್ನೇ ನಡುಗಿಸುವ ಮಟ್ಟಕ್ಕೆ ಬೆಳೆದಿದ್ದು, ಈ ವಿಷಯದಲ್ಲಿ ವಾಲ್ಮೀಕಿ ನಾಯಕ ಸಮಾಜ ಹಿಂದುಳಿದಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ವಾಲ್ಮೀಕಿ ಸಮುದಾಯದ ಮುಖಂಡರನ್ನೇ ಗೆಲ್ಲಿಸಿ, ಸಮಾಜದ ಅಭಿವೃದ್ಧಿಗೆ ಹಾಗೂ ಮುಖ್ಯವಾಹಿನಿಗೆ ಬರಬೇಕೆಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು.
ಭಾನುವಾರ ತಾಲೂಕಿನ ಶ್ರೀ ವರವಿ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕು ವಾಲ್ಮೀಕಿ- ನಾಯಕ ಸಮಾಜದ ಸಂಘಟನಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಾಲ್ಮಿಕಿ ಜನಾಂಗವಿದೆ. ಆದರೂ ರಾಜಕೀಯ ಮೀಸಲಾತಿ ನೀಡುವಲ್ಲಿ ಪಕ್ಷಗಳ ನಾಯಕರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸಮಾಜದವರು ಜಾಗೃತರಾಗಬೇಕು ಎಂದರು.
ನೀತಿ ಸಂಹಿತೆ ಲೆಕ್ಕಕ್ಕಿಲ್ಲ: ತಮ್ಮ ಆಶೀರ್ವಚನದಲ್ಲಿ ಚುನಾವಣಾ ನೀತಿ ಸಂಹಿತೆ ಲೆಕ್ಕಿಸದೆ ರಾಜಕೀಯ ಭಾಷಣವನ್ನೇ ಬಿಗಿದ ಶ್ರೀಗಳು,  ಒಂದು ಹಂತದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಕಟ್ಟಾದೇಶ ನೀಡಿ ಪ್ರತಿಜ್ಞಾವಿಧಿ ಬೋಧಿಸಿ, ಪಕ್ಷಾತೀತವಾಗಿ ಸಮಾಜದ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಮತ್ತು ಅವರ ಗೆಲುವಿಗಾಗಿ ಶ್ರಮಿಸುವುದಾಗಿ ಸಂಕಲ್ಪ ಮಾಡಿಸಿದರು. ಸಮಾಜದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ರಾಮಣ್ಣ ಪಲದೊಡ್ಡಿ, ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜ ಮುಂದೆ ಬರಬೇಕು. ಸಮುದಾಯದ ಎಲ್ಲರಲ್ಲಿಯೂ ಸಂಘಟಿತ ಮನೋಭಾವನೆ ಮೂಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಬಾರದೆಂದು ಹೇಳಿದರು.
ಸರ್ಕಾರ ಪರಿಶಿಷ್ಟ ಪಂಗಡದ (ಎಸ್ಟಿ) ಜನಾಂಗದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಕರೆನೀಡಿದರು. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಮುಖಂಡರನ್ನು ರಾಜಕೀಯವಾಗಿ ಬೆಳೆಯಲು ಬಿಡದೆ ಹತ್ತಿಕ್ಕುವ ಕಾರ್ಯ ನಡೆದಿದೆ ಎಂದು ಹೇಳಿದರಲ್ಲದೆ, ಬಿ. ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ ಬೆಂಬಲಿಸುವಂತೆ ಪರೋಕ್ಷವಾಗಿ ತಿಳಿಸಿದರು.
ಸಮಾಜ ಸಂಘಟನೆ ಸಭೆ ರಾಜಕೀಯ ಪ್ರಚಾರ ಸಭೆಯಾಗಿ ಮಾರ್ಪಟ್ಟರೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸದಿರುವುದು ಚುನಾವಣಾ ಅಧಿಕಾರಿಗಳ ಕರ್ತವ್ಯ ನಿಷ್ಠೆ ಬಗ್ಗೆ ಜನತೆ ಚರ್ಚಿಸುವಂತಾಯಿತು.
ಮುಂಡರಗಿ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಿ.ಎಂ. ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಿದರು. ವರವಿ ಮೌನೇಶ್ವರ ಮಠದ ವಿರೂಪಾಕ್ಷ ಶ್ರೀಗಳು, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ, ಬಿ. ಶಿವಪ್ಪ, ಮಹಾಂತೇಶ ಹಳ್ಳೆಪ್ಪನವರ, ಉಡಚಪ್ಪ ತಳವಾರ, ಶಂಕ್ರಮ್ಮ ಕರಡಿ, ಎಂ.ಬಿ. ಕಗ್ಗಲಗೌಡ್ರ, ಆರ್.ವಿ. ಹಿರೇಗೌಡ್ರ, ಹುಲಿಗೆಪ್ಪ ತಳವಾರ, ಸಂತೋಷ ಗುಂಜಳ, ಫಕ್ಕೀರಪ್ಪ ವರವಿ, ಶಿವಪ್ಪ ಬಳ್ಳಾರಿ ಉಪಸ್ಥಿತರಿದ್ದರು. ಎಸ್.ವಿ. ಬಟ್ಟೂರ, ಸ್ವಾಗತಿಸಿದರು. ಬಿ.ಎಫ್. ಈಟಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement