ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿ ಕಾರ್ಯಗಳೇ ಬಿಜೆಪಿಗೆ ಶ್ರೀರಕ್ಷೆ

Rashmi Kasaragodu
Updated On : 26 Mar 2013, 11:08 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 25
ರೋಣ ಮತಕ್ಷೇತ್ರದಲ್ಲಿ ಕಳೆದ 9 ವರ್ಷದ ಅವಧಿಯಲ್ಲಾದ ಜನಪರ ಅಭಿವೃದ್ಧಿ ಕಾರ್ಯಗಳೇ ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿ ಮುಖಂಡರಿಗೆ ಉತ್ತರ ನೀಡುವುದರ ಜತೆಗೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸೋಮವಾರ ಸ್ಥಳೀಯ ಜಿ.ಕೆ. ಬಂಡಿ ಗಾರ್ಡ್.ನನಲ್ಲಿ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಹಿಂದೆಂದೂ ಆಗದಷ್ಟು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಜನತೆಯ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಗಜೇಂದ್ರಗಡ ಪಟ್ಟಣ ಸೇರಿದಂತೆ ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ತೃಪ್ತಿ ನನಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಅತ್ಯಧಿಕ ಮತಗಳ ಅಂತರದಿಂದ ಜಯಶಾಲಿಯನ್ನಾಗಿಸಿ, ರಾಜ್ಯದಲ್ಲೇ ಮಾದರಿ ಮತಕ್ಷೇತ್ರವನ್ನಾಗಿಸಲು ಸಹಕರಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಮಾತನಾಡಿ, ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಸರ್ಕಾರ ಉತ್ತಮ ಆಡಳಿತ ನಿರ್ವಹಿಸಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ ಎದುರಿಸಿ ಪಕ್ಷ ಬಹುಮತಗಳಿಸಿ, ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ದೇಶದ ಸಾಮಾನ್ಯ ಜನತೆ ಪರದಾಡುವಂತಾಗಿದೆ. ಈ ದಿಸೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದ ಅವರು, ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲೇ ಪಕ್ಷ ಲೋಕಸಭಾ ಚುನಾವಣೆ ಎದುರಿಸಲಿದೆ ಎಂದರು.
ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ರೋಣ ಮತಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ ಅಲೆ ಹೊಂದಿದ ಕ್ಷೇತ್ರವಾಗಿದೆ. ಈ ಬಾರಿಯು ಕಳಕಪ್ಪ ಬಂಡಿಯವರನ್ನು ಗೆಲ್ಲಿಸುವ ಮೂಲಕ ಹ್ಯಾಟ್ರಿಕ್ ಗೆಲುವಿಗೆ ನಾಂದಿಹಾಡಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಎಸ್. ಕರಿಗೌಡರ, ಎಚ್.ಎಸ್. ಸೊಂಪುರ ಮಾತನಾಡಿದರು. ಇದೇ ಸಂದರ್ಭದಲ್ಲಿ ಅನ್ಯಪಕ್ಷ ತೊರೆದು ಹಲವಾರು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಅಶೋಕ ನವಲಗುಂದ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಬ್ಬೀರಅಹ್ಮದ ಖಾಜಿ, ಭಾಸ್ಕರ ರಾಯಬಾಗಿ, ಡಿ.ಎಚ್. ಬಳೂಟಗಿ,  ಬಿ.ಎಂ. ಸಜ್ಜನ, ಹೊಳೆಆಲೂರ ಎಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಬಿಜೆಪಿ ತಾಲೂಕಾಧ್ಯಕ್ಷ ಡಾ. ಆನಂದರಾವ್ ಇನಾಮದಾರ, ಟಿ.ವಿ. ರಾಯಬಾಗಿ, ಮಹಿಳಾ ಮೋರ್ಚಾದ ಕಸ್ತೂರಮ್ಮ ಕಮ್ಮಾರ, ಕವಿತಾ ಜಾಲಿಹಾಳ, ದೀಪಾ ಗೋಯಲ್, ಬಸಮ್ಮ ಸಾಲಿಮಠ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement