ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚಿಕೂನ್ ಗುನ್ಯಾ: ಜನರಲ್ಲಿ ಆತಂಕ

Rashmi Kasaragodu
Updated On : 26 Mar 2013, 11:10 am

ಕನ್ನಡಪ್ರಭ ವಾರ್ತೆ, ಗದಗ/ನರೇಗಲ್ಲ, ಮಾ. 25
ಈ ಹಿಂದೆ (2007) ರಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿಕೂನ್ ಗುನ್ಯಾ ರೋಗ ಕಳೆದ 15 ದಿನಗಳಿಂದ ಜಿಲ್ಲೆಯ ರೋಣ ತಾಲೂಕಿನ ಕಳಕಾಪುರ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, 50ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ನರಳುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
2007ರಲ್ಲಿ ತೀವ್ರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಳೆಆಲೂರ ಸುತ್ತಮುತ್ತಲಿನ 13ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಜನರು ಸಂಕಷ್ಟ ಎದುರಿಸಿದ್ದರು. ಪ್ರವಾಹ ಇಳಿಮುಖವಾದ ನಂತರ ಅಲ್ಲಲ್ಲಿ ನಿಂತ ಕಲುಷಿತ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಯಿಂದ ಹಲವಾರು ಜನರಿಗೆ ನಿಗೂಢ ಕಾಯಿಲೆ ಹೆಸರಿನಲ್ಲಿ ಕಾಣಿಸಿಕೊಂಡು ಆತಂಕಕ್ಕೀಡು ಮಾಡಿತ್ತು. ಈ ಕಾಯಿಲೆ ಬಗ್ಗೆ ತಿಂಗಳಾನುಗಟ್ಟಲೆ ಆರೋಗ್ಯ ಇಲಾಖೆ ಶ್ರಮಿಸಿದ ನಂತರ ಇದರ ಸ್ವರೂಪ ಮತ್ತು ಹೆಸರು ಬಹಿರಂಗಗೊಂಡಿತು. ಆದರೆ ಮತ್ತೆ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸಹಜವಾಗಿ ಜನರಲ್ಲಿ ಭಯ ಮೂಡಿಸಿದೆ.
1967ರಲ್ಲೇ ಕಾಣಿಸಿಕೊಂಡಿತ್ತಂತೆ: ಚಿಕೂನ್ ಗುನ್ಯಾ ರೋಗ 1967 ರಲ್ಲಿ ತಮಿಳುನಾಡಿನಲ್ಲಿ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತ ಪಡಿಸುತ್ತವೆ. ಬಳಿಕ ಹಲವು ವರ್ಷ ಮಾಯವಾಗಿದ್ದ ರೋಗ ಸುಮಾರು 40 ವರ್ಷಗಳ ನಂತರ 2007ರಲ್ಲಿ ಗದಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿತಲ್ಲದೆ ರಾಜ್ಯಾದ್ಯಂತ ವ್ಯಾಪಿಸಿ ಜನರ ಜೀವ ಹಿಂಡಿತ್ತು.
ಬೇಸಿಗೆಯಲ್ಲಿ ಮತ್ತೆ ಪ್ರತ್ಯಕ್ಷ: ಸದ್ಯ ಬೇಸಿಗೆ ಕಾಲದಲ್ಲಿ ಮತ್ತೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಜಿಲ್ಲೆಯಲ್ಲಿ ಬೇಸಿಗೆಯ ಪ್ರಖರತೆಯಿಂದಾಗಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರನ್ನು 15 ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದ್ದು, ಜನರು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಚಿಕೂನ್ ಗುನ್ಯಾ ಸೊಳ್ಳೆಯು ಕುಡಿವ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡಿದಲ್ಲಿ ಮತ್ತೆ ಜಿಲ್ಲೆಯ ಜನತೆ ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ.
ನಿಯಂತ್ರಣ ಅವಶ್ಯ: ಸದ್ಯ ಕೇವಲ ರೋಣ ಜಿಲ್ಲೆಯ ಕಳಕಾಪುರ ಗ್ರಾಮದಲ್ಲಿ ಕಂಡು ಬಂದಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ ಕಾಯಿಲೆ ಜಿಲ್ಲೆಯಾದ್ಯಂತ ವ್ಯಾಪಿಸುವ ಆತಂಕದಲ್ಲಿ ಸಾರ್ವಜನಿಕರಿದ್ದಾರೆ.
ಕೂಡಲೇ ಕ್ರಮ ಕೈಗೊಂಡು ನಿಯಂತ್ರಣಗೊಳಿಸಬೇಕಾಗಿದೆ. ಈಗಾಗಲೇ ಕಳಕಾಪುರ ಗ್ರಾಮದಲ್ಲಿ 20 ದಿನಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಕಾಣಿಸಿಕೊಂಡಿದ್ದು, ನಿಡಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಚಿಕೂನ್.ಗುನ್ಯಾ ಕಾಣಿಸಿಕೊಂಡ ದಿನದಿಂದ ಇಲ್ಲಿಯವರೆಗೆ 3 ಬಾರಿ ಸರ್ವೆಮಾಡಿ ಸೂಕ್ತ ಕ್ರಮಕೈಗೊಂಡಿದ್ದರೂ ರೋಗದ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಕೆಲವು ಜನರು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಗಜೇಂದ್ರಗಡ, ಸೂಡಿ ಹಾಗೂ ನಿಡಗುಂದಿ ಗ್ರಾಮಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳು ಅವಶ್ಯಕ ಔಷಧಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ಆದರೆ, ಈ ಕುರಿತು ಡಿಎಚ್.ಓ ಡಿ.ಬಿ. ಚೆನ್ನಶೆಟ್ಟಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ.
ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement